Cosmic debt
169
—
173
169
ಋಣದ ಮೂಟೆಯ ಹೊರಿಸಿ, ಪೂರ್ವಾರ್ಜಿತದ ಹುರಿಯ ।
ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು ॥
ತೃಣದ ಕಡ್ಡಿಯ ಮುಂದೆ ಹಿಡಿದಾಶೆ ತೋರುತಿರೆ ।
ಕುಣಿವ ಗರ್ದಭ ನೀನು - ಮಂಕುತಿಮ್ಮ ॥ ೧೬೯ ॥
ಋಣದ ಮೂಟೆಯನ್ನು ನಮ್ಮ ಮೇಲೆ ಹೊರಿಸಿ, ಅದನ್ನೂ ಸೇರಿಸಿ, ಪೂರ್ವಾರ್ಜಿತವೆಂಬ ಹುರಿಯಿಂದ ಕುಣಿಕೆ ಮಾಡಿ ನಮ್ಮ ಕೊರಳಿಗೆ, ಬಿಗಿದಿದ್ದಾನೆ ಆ ವಿಧಿ . ನಮ್ಮ ಮುಂದೆ ಒಂದು ಸಣ್ಣ ಹುಲ್ಲುಕಡ್ಡಿಯಂತ ಆಸೆಯನ್ನು ತೋರಿಸುತ್ತಾ, ನಮ್ಮ ಬಾಳನ್ನು ಎಳೆದುಕೊಂಡು ಹೋಗುತ್ತಿದ್ದಾನೆ. ಅವನ ತಾಳಕ್ಕೆ ಕುಣಿಯುವ ಕತ್ತೆ “ನೀನು” ಎಂದು ತಮಗೆ ತಾವು ಹೇಳಿಕೊಳ್ಳುತ್ತಾ ಇಡೀ ಮನುಕುಲದ ಸ್ಥಿತಿಯನ್ನು ವಿಡಂಬನಾತ್ಮಕವಾಗಿ ವರ್ಣಿಸಿದ್ದಾರೆ, ಮಾನ್ಯ ಗುಂಡಪ್ಪನವರು.
170
ಉಣುವುದುಡುವುದು ಪಡುವುದಾಡುವುದು ಮಾಡುವುದು ।
ಋಣಗಳೆಲ್ಲವು ಪೂರ್ವಸಂಚಿತಾಂಶಗಳು ॥
ಹಣೆಯೊಳದು ಲಿಖಿತಮಿರೆಯುಂ ವಾಚಿಸುವನಿಲ್ಲ ।
ಗೊಣಗಾಟವಳಿಸುವುದೆ? - ಮಂಕುತಿಮ್ಮ ॥ ೧೭೦ ॥
ನಾವು ಉಣುವುದು, ಉಡುವುದು, ಆಡುವುದು, ಪಡುವುದು, ಪಾಡುವುದು, ಪರದಾಡುವುದು ಮತ್ತು ಇವುಗಳಿಗೆ ಸಂಬಂಧಪಟ್ಟ ವ್ಯಕ್ತಿಗಳಲ್ಲೆರ ಸಂಬಂಧಗಳೂ ಕೇವಲ ಋಣ ರೂಪದಲ್ಲೇ ನಮಗೆ ಸಂಧಿವೆ.ನಮ್ಮ ಹಣೆಬರಹವೇ ಈ ರೀತಿ ಇರುವಾಗ, ಅದನ್ನು ಓದಲು ಯಾರಿಗೂ ಆಗುವುದಿಲ್ಲ . ಓದಲಾಗದಿದ್ದರೂ ಅದನ್ನು ಕುರಿತು ಗೊಣಗಾಡಿದರೆ, ಬರೆದ ಬರಹ ಅಳಿಸಲಾಗುವುದೇ, ಎಂದು ಪ್ರಾರಬ್ಧ ಕರ್ಮದ ಒಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
171
ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ ।
ಇಂದು ಮೃಷ್ಟಾನ್ನಸುಖ, ನಾಳೆ ಭಿಕ್ಷಾನ್ನ ॥
ಇಂದು ಬರಿಯುಪವಾಸ, ನಾಳೆ ಪಾರಣೆ - ಯಿಂತು ।
ಸಂದಿರುವುದನ್ನ ಋಣ - ಮಂಕುತಿಮ್ಮ ॥ ೧೭೧ ॥
ನಮ್ಮಗೆ ದಕ್ಕುವ ಅನ್ನದ ಋಣ ಒಂದೊಂದು ದಿನ ಒಂದೊಂದು ರೀತಿಯಲ್ಲಿ ಇರುತ್ತೆ ಎಂದು ಸ್ಪಷ್ಟವಾಗಿ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಸುಲಲಿತವಾಗಿ ಬರೆದಿದ್ದಾರೆ. ನಮ್ಮ ಜೀವನದಲ್ಲಿ ಇಂತಹದನ್ನು ನಾವು ಬಹಳ ನೋಡುತ್ತೇವೆ. ಇಂದು ಹಬ್ಬದ ವಾತಾವರಣ ನಾಳೆ ಸೂತಕದ ಭಾವ. ಇಂದು ಪುಷ್ಕಳ ಭೋಜನ ನಾಳೆ ಉಪವಾಸ. ಇಂದು ನಮ್ಮ ಮನೆಯಲ್ಲೇ ಊಟ. ನಾಳೆ ಇನ್ನೆಲ್ಲೋ ಇನ್ಯಾರಮನೆಯಲ್ಲೋ. ಅನ್ನದ ಋಣ ಒಂದೊಂದು ದಿನ ಒಂದೊಂದು ರೀತಿ. ಈ ಜಗತ್ತಿನ ಪರಿಯೇ ಈ ರೀತಿ.
172
ಅರಿ ಮಿತ್ರ ಸತಿ ಪುತ್ರ ಬಳಗವದೆಲ್ಲ ।
ಕರುಮದವತಾರಗಳೊ, ಋಣಲತೆಯ ಚಿಗುರೋ ॥
ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ ।
ವುರಿಮಾರಿಯಾದೀತೊ - ಮಂಕುತಿಮ್ಮ ॥ ೧೭೨ ॥
ಶತ್ರು, ಮಿತ್ರ, ಹೆಂಡತಿ, ಮಗ-ಮಗಳು, ಬಂಧು, ಬಳಗವೆಲ್ಲ ನಮ್ಮ ಪೂರ್ವ ಕರ್ಮದಿಂದಲೇ ಲಭ್ಯವಾದವು ಅಥವಾ ನಾವು ಉಳಿಸಿಕೊಂಡು ಬಂದ ವಾಸನಾ ಶೇಷವೆಂಬ ಬಳ್ಳಿಯ ಹೊಸ ಹೊಸ ಚಿಗುರುಗಳೋ? ಈ ಸಂಸಾರದಲ್ಲಿ ನಾವು ಗೊತ್ತು ಗುರಿಯಿಲ್ಲದ, ತಲೆ ತಗ್ಗಿಸಿ ನಡೆಯುವ ಕುರಿಗಳಂತೆ ಇರುವಾಗ ಈ ಸಂಸಾರ ಉರಿಮಾರಿಯಾದೀತು ಎಂದು ಒಂದು ಎಚ್ಚರಿಕೆಯ ಭಾವವನ್ನು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸಿದ್ದಾರೆ.
173
ಬಂಧುಬಳಗವುಮಂತಕನ ಚಮುವೊ, ಛದ್ಮಚಮು ।
ದಂದುಗದ ಬಾಗಿನಗಳವರ ನಲುಮೆಗಳು ॥
ಕುಂದಿಪ್ಪುವಾತ್ಮನನವರ್ಗಳುಪಕಾರಗಳು ।
ಮಂದಿಗಾಗದಿರು ಬಲಿ - ಮಂಕುತಿಮ್ಮ ॥ ೧೭೩ ॥
ನಮಗಿರುವ ಬಂಧುಗಳು ಮಾರುವೇಷದಲ್ಲಿರುವ ಯಮನ ಸೈನ್ಯದಂತಿರುವರು, ಅವರು ಮಾಡುವ ಉಪಕಾರಗಳು ಮಾತು ಅವರು ನೀಡುವ ಕೊಡುಗೆಗಳು ನಮಗೆ ನೋವುಂಟುಮಾಡಿ ನಮ್ಮ ಆತ್ಮವನ್ನು ಕುಗ್ಗಿಸುತ್ತದೆ. ಹಾಗಾಗಿ ನೀನು ಎಚ್ಚರಿಕೆಯಿಂದ ಇದ್ದು ಈ ಮಂದಿಯ ಉಪಟಳಕ್ಕೆ ಬಲಿಯಾಗದಿರು ಎಂದು ಎಚ್ಚರಿಕೆಯಮಾತನ್ನು ಆಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ .