Problem, resolution
29
—
33
29
ಎರಡುಮಿರಬಹುದು ದಿಟ; ಶಿವರುದ್ರನಲೆ ಬೊಮ್ಮ! ।
ಕರವೊಂದರಲಿ ವೇಣು, ಶಂಖವೊಂದರಲಿ! ॥
ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವುದು ।
ಒರುವನಾಡುವುದೆಂತು? - ಮಂಕುತಿಮ್ಮ ॥ ೨೯ ॥
ಪರಮಾತ್ಮನಿಗೆ, ಶಿವನೆಂಬ ಶಾಂತ ಸುಂದರ ಮತ್ತು ಶುಭಕರವಾದ ರೂಪವೂ ಇರಬಹುದು ಅಥವಾ ರುದ್ರನೆಂದು ಕರೆಯಲ್ಪಡುವ ಭಯಂಕರ ರೂಪವೂ ಇರಬಹುದು ಅಥವಾ ಸರ್ವರನೂ ತನ್ನೆಡೆಗೆ ಆಕರ್ಷಿಸುವ, ನಯನ ಮನೋಹರ, ವೇಣುಗಾನಲೋಲನ ರೂಪವೂ ಇರಬಹುದು ಅಥವಾ ರಣ ಕಹಳೆಗೆ ದನಿಗೂಡಿಸಿ ಯುದ್ಧಕ್ಕೆ ಆಹ್ವಾನವೀಯುವ ಪಾಂಚಜನ್ಯವನ್ನೂದುವ ಕ್ಷಾತ್ರ ರೂಪವೂ ಇರಬಹುದು. ಎರಡು ರೂಪಗಳೂ ಸತ್ಯವಿರಬಹುದು. ಏಕೆಂದರೆ ಕೈ ಚಿಟಿಕೆಯಾಡಿಸಲು, ಎರಡು ಬೆರಳುಗಳೂ ಬೇಕು. ಒಂದೇ ಬೆರಳಲ್ಲಿ ಚಿಟಿಕೆಯಾಗುವುದೇ ಎನ್ನುತ್ತಾರೆ ಶ್ರೀ ಡಿ.ವಿ.ಜಿ ಯವರು ಈ ಕಗ್ಗದಲ್ಲಿ
30
ಬ್ರಹ್ಮವೇ ಸತ್ಯ, ಸೃಷ್ಟಿಯೆ ಮಿಥ್ಯೆಯೆನ್ನುವೊಡೆ ।
ಸಂಬಂಧವಿಲ್ಲವೇನಾ ವಿಷಯಯುಗಕೆ? ॥
ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ ।
ನೆಮ್ಮುವುದದಾರನೋ? - ಮಂಕುತಿಮ್ಮ ॥ ೩೦ ॥
ಬ್ರಹ್ಮವೇ ಸತ್ಯ ಸೃಷ್ಟಿಯೇ ಮಿಥ್ಯ ಎನ್ನುವುದಾದರೆ ಈ ಜಗತ್ತು ಮತ್ತು ಅದನ್ನು ಸೃಷ್ಟಿಮಾಡಿದ ಆ ಪರ ಬ್ರಹ್ಮನಿಗೂ ಯಾವುದೇ ಸಂಬಂಧವಿಲ್ಲವೇನು? ನಮ್ಮ ಕಣ್ಣು ಮನಸ್ಸುಗಳೇ ನಮಗೆ ಅಸತ್ಯವನ್ನು ಹೇಳುವುದಾದರೆ ನಂಬುವುದು ಯಾರನ್ನು ಎಂದು, ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವಿನ ಸಂಬಂಧ ಕುರಿತಾದಂತ ಒಂದು ಅದ್ಭುತ ವಿಷಯವನ್ನು ನಮ್ಮ ಮುಂದಿಡುತ್ತಾರೆ ಶ್ರೀ ಡಿ.ವಿ.ಜಿ.ಯವರು ಈ ಕಗ್ಗದ ರೂಪದಲ್ಲಿ.
31
ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? ।
ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು? ॥
ಅಚ್ಚರಿಯ ತಂತ್ರವಿದು; ಬ್ರಹ್ಮಸೃಷ್ಟಿಗಳೇಕೊ ।
ಮುಚ್ಚಿಹವು ಸಾಜತೆಯ - ಮಂಕುತಿಮ್ಮ ॥ ೩೧ ॥
ಸತ್ಯವಾದ ಆ ಪರಮಾತ್ಮವಸ್ತು ಅಸತ್ಯವಾದ ಈ ಸೃಷ್ಟಿಯ ಹಿಂದೆ ಬಚ್ಚಿಟ್ಟುಕೊಂಡಿರುವುದೇ? ಜಗತ್ತು ಕಾಣುತ್ತದೆ. ಇಂದ್ರಿಯ ಗ್ರಾಹ್ಯ. ಇದನ್ನು ಮಿಥ್ಯವೆಂದು ಅಸಥ್ಯವೆಂದು ಹೇಳುತ್ತಾರೆ. ಆದರೆ ಅದನ್ನು ಸೃಜಿಸಿದ ಶಕ್ತಿ ಕಾಣುವುದಿಲ್ಲ. ಭಾವಿಸಬಹುದು ಮತ್ತು ಕೇವಲ ಅನುಭವ ವೇಧ್ಯ. ಅದನ್ನು ಸತ್ಯವೆನ್ನುತ್ತಾರೆ.ಕಣ್ಣಿಗೆ ಕಾಣದೆ, ಮರೆಯಲ್ಲಿರುವುದನ್ನು ಸತ್ಯವೆಂದು ನಂಬುವುದು ಹೇಗೆ. ಈ ಸೃಷ್ಟಿಕರ್ತ ಮತ್ತು ಅವನ ಸೃಷ್ಟಿಯ ತಂತ್ರ ಬಹಳ ಆಶ್ಚರ್ಯಕರವಾದವು ಮತ್ತು ಸಹಜತೆಯು ಮುಚ್ಚಿಹುದು, ಸ್ಪಷ್ಟವಿಲ್ಲದೆ ,ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.
32
ಪರಬೊಮ್ಮನೀ ಜಗವ ರಚಿಸಿದವನಾದೊಡದು ।
ಬರಿಯಾಟವೋ ಕನಸೊ ನಿದ್ದೆ ಕಲವರವೋ? ॥
ಮರುಳನವನಲ್ಲದೊಡೆ ನಿಯಮವೊಂದಿರಬೇಕು ।
ಗುರಿಗೊತ್ತದೇನಿಹುದೊ? - ಮಂಕುತಿಮ್ಮ ॥ ೩೨ ॥
ಆ ಪರಮಾತ್ಮನು, ನಾವು ಹಿಂದೆ ಹೇಳಿದಂತೆ, ಈ ಜಗತ್ತನ್ನು ಸೃಷ್ಟಿಸಿದ ಎಂದರೆ ಇದರ ಧ್ಯೇಯ ಮತ್ತು ದಿಶೆ ಎರಡೂ ಇಲ್ಲದೆ, ಒಂದು ನಿರ್ದಿಷ್ಟ ನಿಯಮವಿಲ್ಲದೆ ಏಕೆ ಹೀಗೆ ಇದೆ ? ಮಾನವರಿಗೆ ಅರ್ಥವಾಗದ ಈ ಜಗತ್ತನ್ನು ಸೃಷ್ಟಿಸಿ, ಈ ಜಗತ್ತನ್ನು, ಬರಿ ಅವನಾಟವೆಂದೋ, ಕನಸೆಂದೋ, ಮಾಯೆಯೆಂದೋ ಹೇಳಿ, ಅರ ನಿದ್ರೆಯಲಿ ಆಡುವ ಅಸ್ಪಷ್ಟಮಾತುಗಳಂತೆ, ಈ ಜಗತ್ತಿನ ವಿಷಯದಲ್ಲಿ ಒಂದು ಸ್ಪಷ್ಟ ನಿರೂಪಣೆ ಏಕಿಲ್ಲವೆಂದು ಮತ್ತು ಇಂತಹ ಜಗತ್ತನ್ನು ಸೃಷ್ಟಿಮಾಡಿದ, ಆ ಪರಮಾತ್ಮನು ಹುಚ್ಚನಲ್ಲವಷ್ಟೇ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ. ಈ ಕಗ್ಗಗಳನ್ನು ನೋಡಿದರೆ ಏಕೆ ಹೀಗೆ ಗುಂಡಪ್ಪನವರು ಮತ್ತೆ ಮತ್ತೆ ಇದೆ ಪ್ರಶ್ನೆಗಳನ್ನು ಬೇರೆ ಬೇರೆ ರೀತಿಯಲ್ಲಿ ಕೇಳಿದ್ದಾರೆ ಎಂದು ಸಂದೇಹವು ಬರುವುದು, ಸಹಜ. ವಿಷಯವೇ ಹಾಗಿದೆ. ಇದರ ವಿಚಾರವನ್ನು ಮತ್ತೆ ಮತ್ತೆ ಜಿಜ್ಞಾಸೆಗೆ ಒಳಪಡಿಸಿದರೂ ಅರ್ಥವಾಗದಷ್ಟು ಕ್ಲಿಷ್ಟ. ಓದುಗರ ಮನಸ್ಸನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುವ ಪ್ರಯತ್ನ ಮಾನ್ಯ ಗುಂಡಪ್ಪನವರದು.
33
ನರಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ ।
ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ? ॥
ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ ।
ಗುರುವೆಂದು ಕರೆಯುವೆಯ? - ಮಂಕುತಿಮ್ಮ ॥ ೩೩ ॥
ಮಾನವರನ್ನು ಪರೀಕ್ಷಿಸುವುದೇ ಆ ಪರಮಾತ್ಮನ ಆಶಯವೇ? ನಮ್ಮ ಬಾಳು ಬರೀ ಸಮಸ್ಯೆಗಳ ಆಗರವೇ? ಇದಕ್ಕೆ ಅಂತ್ಯವೆಲ್ಲಿ? ಈ ರೀತಿಯ ಪ್ರಶ್ನೆಗಳನ್ನು ಕೇಳಿಸಿಕೊಂಡೂ ಸಹ ಅದಕ್ಕುತ್ತರಬಾರದವನನ್ನು ಗುರುವೆಂದು ಕರೆಯುವೆಯ?