Brahman-chameleon
34
—
38
34
ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳಸುವೀ ।
ಸೃಷ್ಟಿಯಲಿ ತತ್ತ್ವವೆಲ್ಲಿಯೋ ಬೆದಕಿ ನರನು ॥
ಕಷ್ಟಪಡುತಿರಲೆನುವುದೋ ಬ್ರಹ್ಮವಿಧಿಯೇನೋ! ।
ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ ॥ ೩೪ ॥
ಈ ಜಗದ್ಸೃಷ್ಟಿಯ ಬಗ್ಗೆ ಎಷ್ಟು ಚಿ೦ತಿಸಿದರೂ ನಿವಾರಣೆಯಾಗದ ಅನುಮಾನಗಳು, ಸಂದೇಹಗಳು ಹಾಗೆ ಉಳಿದಿವೆ. ಈ ಸೃಷ್ಟಿಯ ರಹಸ್ಯವನ್ನು ಚೇಧಿಸುವುದಕ್ಕಾಗಿ, ತತ್ವಗಳ ಹುಡುಕಿ, ತಡಕಿ ಕಷ್ಟಪದುವುದೇ ಮಾನವರಿಗೆ ಆ ಪರಮಾತ್ಮ ಬರೆದ ಹಣೆಬರಹವೋ, ಇಷ್ಟೇಯೇ ನಮ್ಮ ಪಾಡು ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
35
ಇರಬಹುದು; ಚಿರಕಾಲ ಬೊಮ್ಮ ಚಿಂತಿಸಿ ದುಡಿದು ।
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ॥
ಅರಿತೆನಾನೆನ್ನುವಂತಾಗೆ ಕೃತಿ ಕೌಶಲದ ।
ಹಿರಿಮೆಗದು ಕುಂದಲ್ತೆ? - ಮಂಕುತಿಮ್ಮ ॥ ೩೫ ॥
ಬಹಳಕಾಲ ಯೋಚನೆ ಮಾಡಿ ಶ್ರಮಪಟ್ಟು ಆ ಪರಮಾತ್ಮ ಈ ಅದ್ಭುತವಾದ ಜಗತ್ತನ್ನು ನಿರ್ಮಿಸಿರುವಾಗ, ಕೆಲಕಾಲ ಬದುಕಿ ಸಾವನ್ನಪ್ಪುವ ಯಃಕಶ್ಚಿತ್ ಮಾನವನೆಂಬ ಪ್ರಾಣಿ ಇದರ ರಹಸ್ಯವನ್ನು ತಾನು ಅರಿತುಕೊಂಡು ಬಿಟ್ಟೆ ಎಂದರೆ , ತನ್ನ ಹಿರಿಮೆ, ಶ್ರಮ ಮತ್ತು ಕುಶಲತೆಗಳಿಗೆ ಕುಂದು ಅಥವಾ ಕಳಂಕ ಬಂದಂತೆ ಆಗುತ್ತದೆ ಎಂದು, ಆ ಪರಮಾತ್ಮ, ಆ ಜಗತ್ತಿನ ರಹಸ್ಯಗಳನ್ನು ಸಂಪೂರ್ಣವಾಗಿ ಮಾನವರು ಅರಿತುಕೊಳ್ಳುವ ಶಕ್ತಿಯನ್ನು ಕೊಡಲಿಲ್ಲವೋ ಏನೋ? ಎಂಬ ಕುಹಕವನ್ನಾಡುತ್ತಾರೆ, ಮಾನ್ಯ ಗುಂಡಪ್ಪನವರು.
36
ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ ।
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡಸಿ ॥
ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ ।
ಸೊಲ್ಲಿಪುದು ಸರಿಯೇನೋ? - ಮಂಕುತಿಮ್ಮ ॥ ೩೬ ॥
ಇಡೀ ಜಗತ್ತೇ ಒಂದು ಭ್ರಾಂತಿಯ ಉಂಡೆ. ಮಾನವರಿಗೆ ಯಾವುದೂ ಅರ್ಥವಾಗುವುದಿಲ್ಲ ಆದರೂ ಪ್ರಯತ್ನ ಮಾಡುತ್ತಾನೆ. ಅವನಿಗೆ ಅರಿವಿನ ಮಿತಿ ಉಂಟು. ಅಮಿತವಾದ ಜಗತ್ಸೃಷ್ಟಿಯ ರಹಸ್ಯವನ್ನು ಪರಿಮಿತ ಮತಿಯಿಂದ ಅರಿಯುವುದೆಂತು? . ಈ ಜಗತ್ತನ್ನು ತನ್ನ ಅಪರಿಮಿತ ಶಕ್ತಿಯಿಂದ ಅಗಾಧವಾಗಿ ಸೃಷ್ಟಿಸಿ, ಮಾನವರನ್ನು ಅಲ್ಪಮತಿಗಳನ್ನಾಗಿಸಿ, ಅವನು ಅರಿಯುವ ಪ್ರಯತ್ನದಲ್ಲಿ ಸೋತಾಗ, ಇವನು ಗೆಲ್ಲಲಿಲ್ಲ ಎಂದು ಹೇಳುವುದು ಆ ಪರಮಾತ್ಮನಿಗೆ ಸರಿಯೇ? ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
37
ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ ।
ಅವನ ವೇಷಗಳೇಕೆ ಮಾರ್ಪಡುತಲಿಹವು? ॥
ತವಕಪಡನೇತಕೋ ಕುರುಹ ತೋರಲು ನಮಗೆ ।
ಅವಿತುಕೊಂಡಿಹುದೇಕೋ? - ಮಂಕುತಿಮ್ಮ ॥ ೩೭ ॥
ಈ ಜಗತ್ತನ್ನು ಆ ಪರಮಾತ್ಮನೇ ಸೃಷ್ಟಿಮಾಡಿದ. ಈ ಜಗತಿನಲ್ಲಿರುವ ಎಲ್ಲವನ್ನೂ ಆ ಪರಮಾತ್ಮನೇ ಸೃಷ್ಟಿಮಾಡಿದ ಮತ್ತು ಎಲ್ಲದರಲ್ಲೂ ಅವನೇ ಇರುವನೆಂದು ತತ್ವಜ್ಞಾನಿಗಳು ಹೇಳುತ್ತಾರೆ. ಎಲ್ಲವೂ ಅವನ ರೂಪವೇ ಎಂದು ಹೇಳುತ್ತಾರೆ. ಹಾಗಾದರೆ ಎಲ್ಲದರಲ್ಲೂ ಅವನೇ ಅವತರಿಸಿದ್ದಾನೆ ಎಂದಾದರೆ, ಮತ್ತು ಪರಮಾತ್ಮ ನಿತ್ಯನೂ ಸತ್ಯನೂ ಅದಾಗ, ಈ ರೂಪಗಳ ಬದಲಾವಣೆ ಏಕೆ. ಎಲ್ಲ ರೂಪವೂ ಅವನೇ ಆದರೆ, ಅವನು ತನ್ನ ನಿಜ ರೂಪವನ್ನೇಕೆ ತೋರಿಸುವುದಿಲ್ಲ. ಏಕೆ ಅವಿತುಕೊಂಡಿದ್ದಾನೆ? ಎಂದು ಒಂದು ವಿಷಯವನ್ನು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು.
38
ಬೇರಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ ।
ತೋರಿಪೊಸರವಳ್ಳಿಯಂತೇನು ಬೊಮ್ಮಂ? ॥
ಪೂರ ಮೈದೋರೆನೆಂಬಾ ಕಪಟಿಯಂಶಾವ ।
ತಾರದಿಂದಾರ್ಗೇನು? - ಮಂಕುತಿಮ್ಮ ॥ ೩೮ ॥
ನಾವು ಈ ವರೆಗೆ ಹೇಳಿರುವುದೇನು ಎಂದು ಒಂದು ಬಾರಿ ನೋಡೋಣ. ಎಲ್ಲವೂ ಆ ಪರಮಾತ್ಮನಿಂದ ಆಗಿ ಅವನೇ ಎಲ್ಲ ರೂಪಗಳಲ್ಲಿಯೂ ಪ್ರಕಟವಾಗಿರುವ ಎಂದು ನಮ್ಮ ನಂಬಿಕೆ. ಈ ಪ್ರಪಂಚದಲ್ಲಿ ಇರುವ ಎಲ್ಲವೂ ಆ ಪರಮಾತ್ಮನೇ, ತನ್ನ ಅಂಶದಿಂದ ಪ್ರಕಟವಾಗಿ(ಸಿ)ದ್ದಾನೆ ಎಂದು. ಹಾಗಾಗಿ ಯಾರ್ಯಾರು ಏನೇನು ಎಂದು ಭಾವಿಸಿದರೆ ಹಾಗೆ ಅವರಿಗೆ ತೋರುವ ಆ ಪರಮಾತ್ಮ ವಸ್ತು ಏಕ ರೂಪದಲ್ಲಿ ಏಕೆ ಇಲ್ಲ ಎಂದು ಈ ಕಗ್ಗದ ಪ್ರತಾಪ. ಘಳಿಗೆ ಘಳಿಗೆಗೆ ಬದಲಾಗುವ ಮನುಷ್ಯರ ಮನದ ಭಾವಕ್ಕೆ ತಕ್ಕಂತೆ ಬದಲಾಗುವ ಆ ಪರಮಾತ್ಮ ಸ್ವರೂಪವನ್ನು ಗುಂಡಪ್ಪನವರು, ಊಸರವಲ್ಲಿಯಂತೆ ಕ್ಷಣಕ್ಕೊಂದು ರೂಪವನ್ನು ಏಕೆ ತೋರುತ್ತಾನೆ ಈ ಪರಮಾತ್ಮ. ಆಗಾಗ ಅವನೆತ್ತುವ ಅಂಶಾವತಾರಗಳಿಂದ ಯಾರಿಗೆ ಏನು ಪ್ರಯೋಜನ. ತನ್ನ ನಿಜ ರೂಪವನ್ನೇ ತೋರಬಹುದಲ್ಲ ಎಂದು, ಪ್ರತಾಪಿಸಿ, ಓದುಗರನ್ನು ಆ ಪರಮಾತ್ಮನ ನಿಜ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುತ್ತಾರೆ.