Energy flow
39
—
43
39
ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ ।
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ॥
ಒಸೆದೇತಕವನೀಯನೆಮಗೊಂದು ನಿಜಕುರುಹ ।
ನಿಶೆಯೊಳುಡುಕರದವೊಲು? - ಮಂಕುತಿಮ್ಮ ॥ ೩೯ ॥
ಸುಳ್ಳನ್ನು ನೀನು ಸುಳ್ಳು ಎಂದು ಅರಿತುಕೊಂಡು ಸತ್ಯವನ್ನು ಕಾಣಲು ನಿನಗೆ ಸಹಾಯಮಾಡುವವನಂತಾದರೆ, ಆ ಪರಮಾತ್ಮನು ಮರೆಯಾಗಿ ಮುಸುಕು ಹಾಕಿಕೊಂಡಂತೆ ಇರುವುದಾದರೆ, ಅವನು ನಮ್ಮ ಮೇಲೆ ಪ್ರಸನ್ನನಾಗಿ, ರಾತ್ರಿ ಹೊತ್ತು ನಕ್ಷತ್ರದ ಕಿರಣಗಳು ನಮಗೆ ದಾರಿ ತೋರುವಂತೆ, ಒಂದು ಗುರುತನ್ನು ತನ್ನ ಇರುವಿಕೆಯ ಕುರುಹಾಗಿ ತೋರಿಸಬಾರದೇನು? ಇನ್ನುತ್ತಾರೆ ಶ್ರೀ ಗುಂಡಪ್ಪನವರು ಈ ಕಗ್ಗದಲ್ಲಿ.
40
ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ ।
ಶಶಿರವಿಗಳವನ ಮನೆಕಿಟಕಿಯಾಗಿರರೇಂ? ॥
ಮುಸುಕುಬೆಳಕೊಂದಾದ ಸಂಜೆಮಂಜೇನವನು ।
ಮಿಸುಕಿ ಸುಳಿಯುವ ಸಮಯ? - ಮಂಕುತಿಮ್ಮ ॥ ೪೦ ॥
ಹಗಲಲ್ಲಿ ಕಾಣಬಾರದೆಂತಾದರೆ, ರಾತ್ರಿಯಲ್ಲಿ ಏಕೆ ಕಾಣುವುದಿಲ್ಲ ಆ ಪರಮಾತ್ಮ. ರವಿ ಚಂದ್ರರು ಅವನ ಮನೆಯ ಕಿಟಕಿಗಳೇನು? ಇತ್ತ ಹಗಲೂ ಅಲ್ಲದೆ ನಿಶೆಯೂ ಅಲ್ಲದೆ ಇರುವ ಮುಸ್ಸಂಜೆಯ ಸಮಯವೇನು ಅವನು ಅಲೆದಾಡುವ ಸಮಯ ಎಂದು ಒಂದು ನೇರ ಪ್ರಶ್ನೆಯನ್ನು ಕೇಳುತ್ತಾರೆ. ಮಾನ್ಯ ಗುಂಡಪ್ಪನವರು.
41
ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ ।
ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು ॥
ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು ।
ಒದವಿಪರು ದಿಟದರಿವ - ಮಂಕುತಿಮ್ಮ ॥ ೪೧ ॥
ಆ ದೇವರನ್ನು ಗುಡಿಯಲಿ ಬಿಟ್ಟು, ಬಾಗಿಲನ್ನು ಹಾಕಿ, ಚಿಲಕ ಹಾಕಿ, ಬೀಗ ಜಡಿದು ಬೀಗದ ಕೈಯನ್ನು ಎಸೆದುಬಿಟ್ಟರೆ, ಆಗ ಪಂಡಿತರು ಮತ್ತು ವಿಧ್ವಾಂಸರು ಆ ದೇವರನ್ನು ಕುರಿತ, ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುವ ವ್ಯರ್ಥವಾದವನ್ನು ಬಿಟ್ಟು, ಆ ದೇವರನ್ನು ಕುರಿತಾದ ಸತ್ಯವನ್ನು ಅರಿಯಲು ಸಹಾಯಮಾಡುವರು ಎಂಬುದು ಈ ಕಗ್ಗದ ವಾಚ್ಯಾರ್ಥವು.
42
ಆಹ! ಈ ಮೋಹಗಳೊ ನೇಹಗಳೊ ದಾಹಗಳೊ ।
ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು? ॥
ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ ।
ಈ ಹರಿಬದೊಳಗುಟ್ಟೊ? - ಮಂಕುತಿಮ್ಮ ॥ ೪೨ ॥
ಆಹಾ ಈ ಬಂಧನಗಳು ಸ್ನೇಹಗಳು ಮತ್ತು ಬಯಕೆಗಳು ಇವುಗಳ ಮಧ್ಯೆ ಈ ಜಗತ್ತಿನ ಎಲ್ಲರಲ್ಲೂ ಹೃದಯವಿದೆಯೆಂದು ನೀನು ಅಂದುಕೊಂಡಿದ್ದೀಯಾ. ಪರಸ್ಪರ ಮಾತುಗಳ ಅಟ್ಟಹಾಸದಿಂದ ನಿಮ್ಮನ್ನೂ ಅಂತಹ ಅಟ್ಟಹಾಸಕ್ಕೆ ಪ್ರತಿಕ್ರಿಯಿಸಿಸಿವುದೇ ಈ ಜಗದ್ವ್ಯಾಪಾರದ ಗುಟ್ಟು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
43
ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತೆತ್ತಲುಂ ।
ಮೂಲೆಮೂಲೆಯಲಿ ವಿದ್ಯುಲ್ಲಹರಿಯೊಂದು ॥
ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ ।
ಚಾಲಿಪುದು ಬಿಡು ಕೊಡದೆ - ಮಂಕುತಿಮ್ಮ ॥ ೪೩ ॥
ಪರಮ ಶಕ್ತಿಯ ಉಲ್ಲೇಖ ಈ ಕಗ್ಗದೊಳಗೆ. ಈ ಹಿಂದೆಯೂ ಈ ವಿಷಯದ ಬಗ್ಗೆ ಅವರೂ ಉಲ್ಲೇಖಿಸಿದ್ದಾರೆ, ಮತ್ತೆ ನಾನೂ ಬರೆದಿದ್ದೇನೆ. ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣೀಭೂತವಾದ ಆ ಪರಮ ಶಕ್ತಿಯನ್ನು ಎಲ್ಲ ಸಾಧಕರೂ, ಸಿದ್ಧರೂ, ಸತ್ಪುರುಷರೂ, ಭಕ್ತರೂ ತಮ್ಮ ಭಕ್ತಿ ಪಾರವಶ್ಯದಲ್ಲಿ ಅನುಭವಿಸಿದ್ದಾರೆ. ಮೇಲೆ, ಕೆಳಗೆ, ಒಳಗೆ, ಹತ್ತಿರ, ದೂರ, ಸುತ್ತಲು, ಮತ್ತು ಎತ್ತೆತ್ತಲೂ ಆ ವಿದ್ಯುಲ್ಲಹರಿಯು ಎಲ್ಲವನ್ನು ” ಬಿಡು ಕೊಡದೆ” ಎಂದರೆ ನಿರಂತರವಾಗಿ, ಒಂದು ಕ್ಷಣವೂ ವಿರಾಮವಿಲ್ಲದೇ ನಡೆಸುತ್ತಿದೆ ಎಂದು ಈ ಕಗ್ಗದ ಅಂತರ್ಯ.