Mankuthimmana Kagga

Life's Design

24-28

24

ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೋ? |
ಸುರರಟ್ಟಹಾಸದಿನೆ ನರಭಕ್ತಿಯೆರಲೋ? ||
ಪರಿಕಿಸುವರೇನವರ್ಗೆಳನ್ಯೋನ್ಯಶಕ್ತಿಗಳ? |
ಧರುಮವೆಲ್ಲಿದರಲ್ಲಿ? — ಮಂಕುತಿಮ್ಮ ||

ಮನುಷ್ಯರಲ್ಲಿರುವ ಭಯ ಮತ್ತು ಬಯಕೆಗಳು, ದೇವತೆಗಳ ತಾಯಿ ಮತ್ತು ತಂದೆಗಳೋ? ಮನುಷ್ಯರ ಭಕ್ತಿಯಿಂದ ಕೂಡಿದ ಕೂಗು(ಓರಲು), ಆ ದೇವತೆಗಳ ಜಂಬದ ನಗುವಿಗೆ(ಸುರರ ಅಟ್ಟಹಾಸದಿನೆ) ಹೆದರಿದೆಯೋ? ಅವರ ಪರಸ್ಪರ ಬಲಾಬಲಗಳನ್ನು ಇವರು ಪರೀಕ್ಷಿಸುತ್ತಿರುವರೋ? ಹಾಗಿದ್ದಲ್ಲಿ ಇದರಲ್ಲಿ ಧರ್ಮದ ಪ್ರಶ್ನೆ ಎಲ್ಲಿಂದ ಬಂತು?

The fears and desires of humans — are these the parents of the devas? Does man's cry of devotion arise from the frolic of the devas? Are they testing one another's strengths? where is dharma in all this?

25

ಜೀವಗತಿಗೊಂದು ರೇಖಲೇಖವಿರಬೇಕು |
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ||
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? |
ಆವುದೀ ಜಗಕಾದಿ? — ಮಂಕುತಿಮ್ಮ ||

ರೇಖಲೇಖ —ಅಕ್ಷಾಂಶಗಳನ್ನು ರೇಖಾಂಶಗಳನ್ನು ಗುರುತಿಸುವ ಒಂದು ಪಟ; ಮತ್ತು ದಿಕ್ಕುಗಳನ್ನು ಸೂಚಿಸುವ ದಿಕ್ಸೂಚಿ ಹಡಗು ಮತ್ತು ದೋಣಿಗಳನ್ನು ನಡೆಸುವವನಿಗೆ ದಿಕ್ಕು ಮತ್ತು ದಿನ ತೋರಿಸಲು, ಒಂದು ದಿಕ್ಸೂಚಿ ಇರುವಂತೆ, ಈ ಬಾಳನ್ನು ನಡೆಸಲು ಸಹ ಒಂದು ಸರಿಯಾದ ದಾರಿಯಿರಬೇಕು. ಈ ದಾರಿಗೆ ಇರುವ ಮೊದಲು ಮತ್ತು ಕೊನೆ ಎರಡು ಕಾಣಿಸದಿದ್ದಲ್ಲಿ, ಇದನು ಊಹಿಸುವುದು ಹೇಗೆ? ಈ ಜಗತ್ತಿಗೆ ಮೊದಲು ಯಾವುದು? ಯಾರಿಗಾದರು ತಿಳಿದಿದೆಯೆ?

The track of life needs a chart of lines. A sailor has those to know direction,
to count the days. If we know not beginning or end, how can we visualize it? What is the beginning of this universe?

26

ಸೄಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ |
ಇಷ್ಟ ಮೋಹಕ ದಿವ್ಯಗುಣಗಳೊಂದು ಕಡೆ ||
ಕಷ್ಟ ಬೀಭತ್ಸ ಘೋರಂಗಳಿನ್ನೊಂದು ಕಡೆ |
ಕ್ಲಿಷ್ಟವೀ ಬ್ರಹ್ಮಕೃತಿ — ಮಂಕುತಿಮ್ಮ ||

ಈ ಸೃಷ್ಟಿಯ ಉದ್ದೇಶವಾದರು ಏನು? ಅದು ಸ್ಪಷ್ಟವಾಗಿಲ್ಲ. ಸರಿಯಾಗಿ ತಿಳಿಯಲಾಗುವುದಿಲ್ಲ. ಅದರ ಜೊತೆಗೆ, ಬಹಳ ತೊಡಕಾದದ್ದೂ(ಸಂಶ್ಲಿಷ್ಟ) ಹೌದು. ಒಂದು ಕಡೆ, ನಮಗೆ ಪ್ರೀತಿಪಾತ್ರವಾಗಿರುವ ಮತ್ತು ಮರುಳುಗೊಳಿಸುವ, ಸುಂದರ ಸ್ವ್ಭಾವಗಳು. ಇನ್ನೊಂದು ಕಡೆ ಕಠಿಣ ಹಾಗು ಅಸಹ್ಯವಾಗಿರುವ(ಬೀಬತ್ಸ) ಭಯಂಕರಗಳು. ಈ ರೀತಿಯಾಗಿ, ಈ ಬ್ರಹ್ಮಸೃಷ್ಟಿ ಅರ್ಥ ಮಾಡಿಕೊಳ್ಳುವುದಕ್ಕೆ ಬಹಳ ಕಷ್ಟವಾದದ್ದು(ಕ್ಲಿಷ್ಟ).

The purpose of creation is unclear, complex. Lovely, enchanting, divine qualities on one side. Vexing, disgusting, ghastly elements on the other. This act of brahman is complicated!

27

ಧರೆಯ ಬದುಕೇನದರ ಗುರಿಯೇನು ಫಲವೇನು? |
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ||
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಕಗಕಿಂತ |
ನರನು ಸಾಧಿಪುದೇನು? — ಮಂಕುತಿಮ್ಮ ||

ಈ ಪ್ರಪಂಚದ ಬದುಕಿನ ಉದ್ದೆಶ ಮತ್ತು ಅದರ ಪ್ರಯೋಜನಗಳೇನು? ಇವು ವ್ಯರ್ಥವಾದ ಕೇವಲ ಓಡಾಟ, ಹೊಡೆದಾಟ ಮತ್ತು ತೊಳಲಾಟ ಮಾತ್ರವೇ? ಸುತ್ತಿ ಸುತ್ತಿ ತನ್ನ ಹೊಟ್ಟೆಯನ್ನು ತುಂಬಿಕೊಳ್ಳುವ ಪ್ರಾಣಿ ಮತ್ತು ಪಕ್ಷಿಗಳಿಗಿಂತ ಹೆಚ್ಚಿನದೇನನ್ನಾದರೂ ಮನುಷ್ಯನು ಸಾಧಿಸುತ್ತಾನೆಯೋ?

What is life on earth? What is its purpose? What is its goal? Mere hustle, struggle, illusion? What have humans achieved more than birds and beasts that wander about for their bellies?

28

ಕಾರುಣ್ಯ ಸರಸ ಸೌಂದರ್ಯ ರುಚಿಗಳೆ ಸೃಷ್ಟಿ |
ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ||
ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ |
ತೋರುವುದಾವುದು ದಿಟವೊ — ಮಂಕುತಿಮ್ಮ ||

ಮರುಕ, ವಿನೋದ, ಹಾಸ್ಯ ಮತ್ತು ಸೌಂದರ್ಯಗಳೇ, ಈ ಸೃಷ್ಟಿಗೆ ಕಾರಣವೆಂದು ಕೆಲವು ಸಲ ಅನ್ನಿಸುತ್ತದೆ. ಇನ್ನೊಂದು ಸಲ ಬಡತನ, ಜಿಪುಣತನ ಕೃರತನಗಳೇ, ಈ ಸೃಷ್ಟಿಯ ಉದ್ದೇಷವೆಂದೆನುಸುತ್ತದೆ. ಈ ಎರಡರಲ್ಲಿ ನಿಜ ಯಾವುದು ಎನ್ನುವುದು ನಮ್ಮ ಮನಸ್ಸಿಗೆ ಗೋಚರವಾಗುವುದಿಲ್ಲ.

At one moment creation's purpose appears to be compassion, tenderness, beauty, flavor. At another moment it appears to be greed and cruelty. It is unclear which is true.