Arid Menance
19
—
23
19
ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಹೊರಳದು ।
ಆಳೆನಿಪುದಂತಾಗದಿರೆ ಬರಿಯ ಹೆಂಟೆ ॥
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ ।
ಕ್ಷೇಳವೇನಮೃತವೇಂ - ಮಂಕುತಿಮ್ಮ ॥ ೧೯ ॥
ಈ ದೇಹವನ್ನು ಮಣ್ಣು೦ಡೆಗೆ ಹೋಲಿಸಿದ್ದಾರೆ ಮತ್ತು ಈ ದೇಹದಲ್ಲಿ ಆಡುವ ಉಸಿರು ( ಗಾಳಿ ) ಆಡುತ್ತಿದ್ದರೆ ನಾವುಗಳು “ಆಳು” ಎಂದು ಎನ್ನಿಸಿ ಕೊಳ್ಳುತ್ತೇವೆ. ಇಲ್ಲದಿದ್ದರೆ ಈ ದೇಹ ಬರೀ ಮಣ್ಣಿನ ಹೆಂಟೆ ಎಂದು ಒಂದು ಅತ್ಯುತ್ತ್ತಮ ಸತ್ಯವನ್ನು ಪ್ರತಿಪಾದಿಸುತ್ತಾರೆ. ಇಂದು ನಮ್ಮ ಸ್ನೇಹಿತರೊಬ್ಬರು ಇದಕ್ಕೆ ಸರಿಯಾಗಿ” ಬಡಿತ ನಿಂತರೆ ಬಡಿವಾರ ಬಂದ್ ” ಎಂದು ಹಿಂದಿನ ಕಗ್ಗಕ್ಕೆ ಪ್ರತಿಕ್ರಿಯೆ ನೀಡಿ, ಬಹಳ ಸೂಕ್ತವಾಗಿ ಹೇಳಿದರು. ಬಹುಶಃ ಅವರಿಗೆ ಇಂದಿನ ಕಗ್ಗದ ಪರಿಚಯವಿತ್ತೇನೋ ಎಂದು ಅನ್ನಿಸುತ್ತದೆ. ಇರಲಿ ಗುಂಡಪ್ಪನವರು ಈ ಬಾಳನ್ನು ದೂಳ ಸುಳಿ ಎಂದು ಕರೆಯುತ್ತಾರೆ. ಇದು ಬಹಳ ಸೂಕ್ತವಾಗಿದೆ. ಏಕೆಂದರೆ,ನಾನು ಹಿಂದೆ ಒಮ್ಮೆ ಈ ಬ್ರಹ್ಮಾಂಡದ ವಿವರಣೆಯನ್ನು ಮಾಡುವಾಗ, ಇಡೀ ಬ್ರಹ್ಮಾಂಡವು ಎಷ್ಟು ದೊಡ್ಡದೆಂದರೆ, ಇದರೆದುರು ನಾವು ಒಂದು ದೂಳ ಕಣವೂ ಅಲ್ಲ ಎಂದು ಹೇಳಿದ್ದೆ. ಈಗ ಮಣ್ಣಿಂದ ಆದ, ಮತ್ತು ಈ ಸಮಸ್ತ ಭೂಮಂಡಲವನ್ನು ನಿವಾಸಸ್ಥಾನವನ್ನಾಗಿಸಿಕೊಂಡ ಪ್ರಾಣಿಗಳೆಲ್ಲವೂ ಧೂಳ ಕಣಗಳೇ ಎಂದು ಗುಂಡಪ್ಪನವರು ಹೇಳುತ್ತಾರೆ.
20
ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? ।
ಚಂಡಚತುರೋಪಾಯದಿಂದಲೇನಹೊದು? ॥
ತಂಡುಲದ ಹಿಡಿಯೊಂದು ತುಂಡು ಬಟ್ಟೆಯದೊಂದು ।
ಅಂಡಲೆತವಿದಕೇನೊ? - ಮಂಕುತಿಮ್ಮ ॥ ೨೦ ॥
ಅಂದಿನ ಮತ್ತು ಇಂದಿನ ವಾಸ್ತವಿಕ ಚಿತ್ರಣವನ್ನು ನಮಗೆ ಗುಂಡಪ್ಪನವರು ಕೊಟ್ಟಿದ್ದಾರೆ ಈ ಕಗ್ಗದಲ್ಲಿ. ನಮ್ಮಲ್ಲಿ ಅನೇಕ ದೇವರುಗಳು. ಆ ದೇವರುಗಳ ಸಂಖ್ಯೆ ಎಷ್ಟಿದೆಯಂದರೆ ಎಣಿಸಲೂ ಸಾಧ್ಯವಿಲ್ಲ. ಒಂದುಕಡೆ ತಿರುಪತಿ ತಿಮ್ಮಪ್ಪನಾದರೆ, ಇನ್ನೊಂದು ಕಡೆ, ಬದರಿಯ ಬದರೀನಾಥ, ಒಂದುಕಡೆ ಮಧುರೆಯ ಮೀನಾಕ್ಷಿಯಾದರೆ, ಇನ್ನೊಂದುಕಡೆ ಕಾಶಿಯ ವಿಶಾಲಾಕ್ಷಿ, ಒಂದುಕಡೆ ಪೂರಿಯ ಜಗನ್ನಾಥನಾದರೆ ಇನ್ನೊಂದುಕಡೆ ತಿರುವನಂತಪುರದ ಅನಂತಪದ್ಮನಾಭ, ಒಂದುಕಡೆ ವಿನಾಯಕನಾದರೆ, ಇನ್ನೊಂದುಕಡೆ ಷಣ್ಮುಖ, ಹೀಗೇ ಬರೆಯುತ್ತಹೋದರೆ ಪಟ್ಟಿ ಬಹಳ ಉದ್ದ ಆದೀತು. ದೇಶ ಕಾಲ ಸಂಧರ್ಭಕ್ಕನುಗುಣವಾಗಿ ನಮಗೆ ನಾವು ಪೂಜಿಸುವ ದೇವತೆಗಳು ಬದಲಾಗುತ್ತ ಹೋಗುತ್ತಾರೆ. ಇದನ್ನೇ ಗುಂಡಪ್ಪನವರು “ಕಂಡ ದೈವಕ್ಕೆಲ್ಲ” ಎಂದಿರಬೇಕು.
21
ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ ।
ಮಣ್ಣೆನುವನ್; ಅವನ ವರ ಮಣ್ಣೆನುವೆ ನೀನು ॥
ಭಿನ್ನಮಿಂತಿರೆ ವಸ್ತುಮೌಲ್ಯಹಳ ಗಣನೆಯೀ ।
ಪಣ್ಯಕ್ಕೆ ಗತಿಯೆಂತೊ? - ಮಂಕುತಿಮ್ಮ ॥ ೨೧ ॥
ಯಾವುದನ್ನು ನೀನು ಚಿನ್ನ ಎಂದು ಕೈಗೆ ಎತ್ತಿಕೊಳ್ಳುತೀಯೋ, ಅದು ವಾಸ್ತವದಲ್ಲಿ ಚಿನ್ನವಾಗಿರದೆ, ಮಣ್ಣಂತೆ ನಿಷ್ಪ್ರಯೋಜಕವಾಗುತ್ತದೆ. ಆದರೆ ಕೆಲವು ಬಾರಿ ಬಯಸದೆ ಸಂದ ಭಾಗ್ಯವನ್ನು, ಆಪರಮಾತ್ಮನ ಕರುಣೆಯಿಂದ ವರ ರೂಪದಲ್ಲಿ ಸಂದದ್ದು ನಿನಗೆ ನಿಷ್ಪ್ರಯೋಜಕವಾಗಿ ಕಾಣುತ್ತದೆ. ಹೀಗೆ ವಸ್ತುಗಳ ನಿಜರೂಪ ಗುರುತಿಸುವುದರಲ್ಲಿ ನಮಗೆ ವ್ಯತ್ಯಾಸವಾದರೆ ಈ ಜಗತ್ತಿನ ವ್ಯಾಪಾರ ನಡೆಯುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು.
22
ಕೃತ್ರಿಮವೊ ಜಗವೆಲ್ಲ! ಸತ್ಯತೆಯದೆಲ್ಲಿಹುದೊ? ।
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು ॥
ಚತ್ರವೀ ಜಗವಿದರೊಳಾರ ಗುಣವೆಂತಹುದೊ! ।
ಯಾತ್ರಿಕನೆ, ಜಾಗರಿರೊ - ಮಂಕುತಿಮ್ಮ ॥ ೨೨ ॥
ಹಿಂದಿನ ಐದು ಕಗ್ಗಗಳಲ್ಲಿ ವೇದಾಂತದ ಹಲವು ವಿಚಾರಗಳನ್ನು ನಮಗೆ ಅರುಹುತ್ತಾ, ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು, ಈ ಜಗತ್ತಿನ ಪ್ರಸ್ತಾಪ ಮಾಡುತ್ತಾರೆ. ಈ ಜಗತ್ತು ಕೃತ್ರಿಮವೆನ್ನುತ್ತಾರೆ. ಇದನ್ನು ಕೇವಲ ಮಾನವರಜಗತ್ತಿಗೆ ಅನ್ವಯಿಸಿಕೊಳ್ಳಬೇಕು. ಏಕೆಂದರೆ, ಗಿಡ, ಮರ, ಪಶು ಪಕ್ಷಿ ಮತ್ತು ಅನ್ಯ ಜೀವಿಗಳಲ್ಲಿ ಇಂದಿಗೂ ಕೃತ್ರಿಮತೆ ನಾವು ಕಾಣುವುದಿಲ್ಲ. ಈ ಕೃತ್ರಿಮತೆ ಏನಿದ್ದರೂ ಕೇವಲ ಮಾನವರಿಗೆ ಅನ್ವಯಿಸುತ್ತದೆ. “ಏಕೆ ಹೀಗೆ? ಮಾನವರಲ್ಲಿ ಮಾತ್ರ ಏಕೆ? ಮಾನವರು ಮೊದಲಿನಿಂದಲೂ ಹೀಗೇ ಇದ್ದಾರೆಯೇ ಅಥವಾ ಈ ಕೃತ್ರಿಮತೆ ಕಾಲಕ್ರಮೇಣ ಜನಮಾನಸದಲ್ಲಿ ಹೊಕ್ಕಿದೆಯೇ?” ಎಂಬುದನ್ನು ಯೋಚಿಸಿದಾಗ ನಮಗೆ ಕಾಣುವುದು ಹೀಗೆ . ಮಾನವಮೊದಲಿನಿಂದಲೂ ಕೃತ್ರಿಮನಲ್ಲ. ಪ್ರಕೃತಿಯ ಮಗುವಾಗಿ ಪ್ರಕೃತಿಯಲ್ಲಿ ಒಂದಾಗಿ ಅಲ್ಲೇ ಜೀವಿಸುತ್ತಿದ್ದ. ಅವನೂ ಸಹ ಮಿಕ್ಕೆಲ್ಲ ಪ್ರಾಣಿಗಳಂತೆ, ತನ್ನ ಆಹಾರ ಹುಡುಕುವುದು, ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಮತ್ತು ತನ್ನ ಸಂತತಿಯನ್ನು ಬೆಳೆಸುವುದು, ಇಷ್ಟಕ್ಕೆ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸಿಕೊಂಡಿದ್ದ.
23
ತಿರುತಿರುಗಿ ತೊಳಲುವುದು ತಿರಿದನ್ನವುಣ್ಣುವುದು ।
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು ॥
ಮರಳಿ ಕೊರಗಾಡುವುದು ಕೆರಳುವುದು ನರಳುವುದು ।
ಇರವಿದೇನೊಣರಗಳೆ? - ಮಂಕುತಿಮ್ಮ ॥ ೨೩ ॥
ಮತ್ತೆ ಮತ್ತೆ ಮನುಷ್ಯ ಪರದಾಡುವುದು, ನಾವು ಎಲ್ಲ ಕಡೆಯೂ ಕಾಣಬಹುದು. ಪರದಾಡಿ ಅವರಿವರನ್ನು ಕಾಡಿ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವುದು. ಪಡೆದದ್ದು ಹೆಚ್ಚಾದರೆ ಮೆರೆದು ಅಹಂಕಾರ ತೋರಿಸುವುದು. ತಮ್ಮನ್ನು ತಾವು, ಬಹಳ ಸಾಧಿಸಿದೆವೆಂದು ಅಹಂಕಾರದಿಂದ ಮೆರೆಯುವುದು., ಪಡೆದದ್ದನ್ನು ಉಳಿಸಿಕೊಳ್ಳಲು ಅವರಿವರ ಮುಂದೆ ಹಲ್ಲು ಕಿರಿಯುವುದು, ಗಿಂಜುವುದು, ಬೇಡುವುದು ನಾವು ಸರ್ವೇ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣುತ್ತೇವೆ. ತಾವು ಅಂದುಕೊಂಡದ್ದು ಸಿಗದಿದ್ದ್ದರೆ ಕೋಪಗೊಳ್ಳುವುದು,ಹಾಗೂ ಸಿಗದಿದ್ದರೆ, ಕೈಲಾಗತನದಿಂದ ಸಂಕಟಪಡುವುದು ಅಥವಾ ನರಳುವುದು, ಇದನೆಲ್ಲಾ ಮಾನ್ಯ ಡಿ.ವಿ.ಜಿ.ಯವರು ಸತ್ವವಿಲ್ಲದ ಒಣ ರಗಳೆ ಅಥವಾ ಸತ್ವವಿಲ್ಲದ ಜೀವನದ ಪರಿ ಎಂದು ಈ ಕಗ್ಗದಲ್ಲಿ ಸೂಚ್ಯವಾಗಿ ಹೇಳುತ್ತಾರೆ.