Churning of world and life
14
—
18
14
ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು ।
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ॥
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು ।
ಬಂದುದೀ ವೈಷಮ್ಯ? - ಮಂಕುತಿಮ್ಮ ॥ ೧೪ ॥
ಒಂದೇ ಆಕಾಶವ ಕಾಣುತ, ಒಂದೇ ನೆಲವನ್ನು ತುಳಿಯುತ ಒಂದೇ ಧಾನ್ಯವನ್ನು ಉಣ್ಣುತ ಒಂದೇ ಗಾಳಿಯನು ಉಸಿರಾಡುವ ಮಾನವಜಾತಿಯ ಒಳಗೆ ಈ ದ್ವೇಷ ಹೇಗೆ ಬಂತು ಎಂದು ತಮಗೆ ತಾವೇ ಪ್ರಶ್ನಿಸುತ್ತ ಈ ವಿಚಾರವನ್ನು ಓದುಗರ ಮುಂದಿಟ್ಟಿದ್ದಾರೆ, ಶ್ರೀ ಗುಂಡಪ್ಪನವರು.
15
ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ ।
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ॥
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ ।
ತಳಮಳಿಸುತಿದೆ ಲೋಕ - ಮಂಕುತಿಮ್ಮ ॥ ೧೫ ॥
ಈಗ್ಗೆ ಎಪ್ಪತ್ತು ವರ್ಷಗಳ ಕೆಳಗೇ ಗುಂಡಪ್ಪನವರಿಗೆ ಹೀಗೆ ಅನ್ನಿಸಿದ್ದರೆ, ಇಂದು ಅವರು ಏನನ್ನುತ್ತಿದ್ದರೋ ಏನೋ!ಇರಲಿ, ಪುರಾತನ ಕಾಲದಿಂದಲೂ ಅನೂಚಾನವಾಗಿ ಜನಗಳಲ್ಲಿ ಇದ್ದ ದೇವರಲ್ಲಿ ಭಕ್ತಿ ಮತ್ತು ಸಂಪ್ರದಾಯಗಳಲ್ಲಿ ಇದ್ದ ಶ್ರದ್ಧೆ ಈಗ ಅಳಿಸಿ ಹೋಗಿದೆ. ಇಲ್ಲಿ ಸಂಪ್ರದಾಯ ಎಂದರೆ ಹಿಂದಿನಿಂದ ಬಂದಿರುವ ನಡವಳಿಕೆ ಎಂದಷ್ಟೆ ಅರ್ಥ. ಜನರಲ್ಲಿ ಮತ್ತೆ ಈ ಭಕ್ತಿ ಮತ್ತು ಶ್ರದ್ಧೆಗಳನ್ನು ತರಲು ಯಾವ ಹೊಸ ಸಿದ್ಧಾಂತಗಳೂ ಪ್ರತಿಪಾದಿಸಲ್ಪಟ್ಟು ಪ್ರಚಾರಕ್ಕೆ ಬಂದಿಲ್ಲ. ಹಾಗಾಗಿ ಜನರೆಲ್ಲರೂ ಮೊದಲಿನಿಂದ ಬಂದದನ್ನು ಕಳೆದು ಕೊಂಡು ಹೊಸದಿಲ್ಲದೆ ಒಂದು ಅತಂತ್ರ ಸ್ಥಿತಿಯಲ್ಲಿದ್ದಾರೆ. ಯಾರ ಸಹಾಯವೂ ಇಲ್ಲದೆ ಸುಲಭವಾಗಿ ಮತ್ತು ಚೆನ್ನಾಗಿ ಓಡಾಡಲು ಅಭ್ಯಾಸವಾಗಿರುವ ಮನೆ ಕುಸಿದು ಹೋದರೆ, ಆ ಮನೆಯಲ್ಲಿ ವಾಸಿಸುವ ಕುಂಟನಿಗೋ ಕುರುಡನಿಗೋ, ಪಾಪ ತಳಮಳಿಸುವ ಮತ್ತು ಪರದಾಡುವಂತೆ ಆಗುತ್ತದಲ್ಲವೇ? ಹಾಗೆ ಆಗಿದೆ ಇಂದಿನ ಲೋಕದ ಪರಿಸ್ಥಿತಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
16
ಇಳೆಯ ಬಿಟ್ಟಿನ್ನು ಮೆತ್ತಲುಮೈದದ ಪ್ರೇತ ।
ವಲೆವಂತೆ ಲೋಕ ತಲ್ಲಣಿಸುತಿಹುದಿಂದು ॥
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ
ತಳಮಳಕೆ ಕಡೆಯೆಂದೊ? - ಮಂಕುತಿಮ್ಮ ॥ ೧೬ ॥
ಈ ಭೂಮಿಯನ್ನು ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ. ಹಳೆ ಧರ್ಮ ಸತ್ತಿದೆ. ಹೊಸ ಧರ್ಮ ಹುಟ್ಟಿಲ್ಲ ತಳಮಳಕೆ ಕಡೆ ಎಂದು ಮಂಕುತಿಮ್ಮ ಎಂದು ತಮ್ಮನ್ನು ತಾವೇ ಪ್ರಶ್ನಿಸುತ್ತಾ ಅದೇ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ.
17
ತಳಮವಿದೇನಿಳೆಗೆ? ದೇವದನುಜರ್ಮಥಿಸೆ ।
ಜಳನಿಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ? ॥
ಹಾಳಾಹಳಾವ ಕುಡಿವ ಗಿರಿಶನಿದ್ದಿರ್ದೊಡೀ ।
ಕಳವಳವದೇತಕೆಲೋ? - ಮಂಕುತಿಮ್ಮ ॥ ೧೭ ॥
ಇಲ್ಲಿ ಒಂದು ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾರೆ, ಶ್ರೀ ಗುಂಡಪ್ಪನವರು. ಆಗ ಎಲ್ಲೆಲ್ಲೂ ಅತಂತ್ರದ ಸ್ಥಿತಿ. ಹಳೆಯ ಭಕ್ತಿ ಶ್ರದ್ಧೆಗಳು ಸಶಿಸಿ ಹೊಸದು ಯಾವುದೋ ಇಲ್ಲದೆ, ಒಂದು ಅತಂತ್ರದ ಸ್ಥಿತಿ ಇದೆ. ಜನರೆಲ್ಲಾ ಕಳವಳ ಗೊಂಡು ತಳಮಳಿಸುತ್ತಿದ್ದಾರೆ. ಅಂತ ಸ್ಥಿತಿಯಲ್ಲಿ ಇವರಿಗೊಂದು ಆಶಾಭಾವನೆ. ಅದನ್ನು ಅವರು ಈ ಕಗ್ಗದಲ್ಲಿ ಸೂಚಿಸುತ್ತಾರೆ.
18
ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ ।
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ॥
ಬದುಕೇನು ಸಾವೇನು ಸೊದೆಯೇನು ವಿಷವೇನು? ।
ಉದಕಬುದ್ಬುದವೆಲ್ಲ! - ಮಂಕುತಿಮ್ಮ ॥ ೧೮ ॥
ವಾಚಕರೆ ಹಿಂದಿನ ಕಗ್ಗದಲ್ಲಿ ಈ ಹಳತು ಹೊಸತನದ ತಿಕ್ಕಾಟವನ್ನು ಅಮೃತಕ್ಕಾಗಿ ನಡೆಯುವ ಸಮುದ್ರ ಮಂಥನಕ್ಕೆ ಹೋಲಿಸಿದರು ಮಾನ್ಯ ಡಿ.ವಿ.ಜಿ ಯವರು.ಆದರೆ ಇಂದಿನ ಕಗ್ಗದಲ್ಲಿ ಒಂದು ವೇದಾಂತದ ಮಾತನ್ನು ಸೂಚಿಸಿದ್ದಾರೆ. ಇಡೀ ಜೀವನವನ್ನು ಅವರು ಒಂದು ನದಿಯ ತೆರೆ ಅಥವಾ ಅಲೆಯಂತೆ ಎಂದಿದ್ದಾರೆ. ಒಂದು ನಿಮಿಷವೂ ಒಂದೇ ತೆರನಾಗಿ ಇರದ ನದಿಯ ತೆರೆಗೆ ಹೋಲಿಸಿದ್ದಾರೆ.