Humans or demons?
9
—
13
9
ಏನು ಭೈರವಲೀಲೆಯೀ ವಿಶ್ವವಿಭ್ರಮಣೆ ।
ಏನು ಭೂತಗ್ರಾಮನರ್ತನೊನ್ಮಾದ ॥
ಏನಗ್ನಿ ಗೋಳಗಳು! ಏನಂತರಾಳಗಳು! ।
ಏನು ವಿಸ್ಮಯ ಸೃಷ್ಟಿ! - ಮಂಕುತಿಮ್ಮ ॥ ೯ ॥
ಏನಿದು ಭೈರವ ಲೀಲೆ. ಏನಿದು ಇಡೀ ವಿಶ್ವದ ಸುತ್ತಾಟ. ಏನಿದು ಪಂಚ ಮಹಾ ಭೂತಗಳ ಮತ್ತು ಆ ಭೂತಗಳ ವಾಸಸ್ಥಳವಾದ ಆ ಮಹಾ ಚೈತನ್ಯ ಮತ್ತು ಮತ್ತು ಆ ಚೈತನ್ಯದ ಉನ್ಮಾದಭರಿತ ನರ್ತನ. ಏನಿದು ಅಗ್ನಿ ಗೋಳಗಳು ಈ ಸೃಷ್ಟಿಯ ಅಂತರಾಳ. ಆಹಾ ಎಂತಹ ಈ ವಿಸ್ಮಯ ಈ ಸೃಷ್ಟಿ. ಇದು ಈ ಕಗ್ಗದ ಅಂತರ್ಯದ ಭಾವ.
10
ಏನು ಪ್ರಪಂಚವಿದು! ಏನು ಧಾಳಾಧಾಳಿ!।
ಏನದ್ಭುತಾಪಾರಶಕ್ತಿನಿರ್ಘಾತ! ॥
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು?।
ಏನರ್ಥವಿದಕೆಲ್ಲ?- ಮಂಕುತಿಮ್ಮ ॥ ೧೦ ॥
ಇಲ್ಲಿಯವರೆಗೆ ಬಂದ ೯ ಕಗ್ಗಗಳಲ್ಲಿ, ಮೊದಲ ಮೂರು ಕಗ್ಗಗಳಲಿ, ಶ್ರೀ ಗುಂಡಪ್ಪನವರು, ಆ ಪರಮಾತ್ಮನೆಂದೆನಿಸಿಕೊಂಡ, ಪರಮಶಕ್ತಿಗೆ ನಮಿಸುತ್ತಾ, ಮುಂದಿನ ಕಗ್ಗಗಳಲ್ಲಿಮನುಷ್ಯನ ಜೀವನದ ಮತ್ತು ಸೃಷ್ಟಿಯ ವಿಚಿತ್ರಗಳನ್ನು ಬರೆದಿದ್ದಾರೆ. ಈ ಸಮಯಕ್ಕೆ ನಾ ಹಿಂದೆ ಹೇಳಿದಂತೆ ಎರಡನೇ ಮಹಾ ಯುದ್ಧ ಆರಂಭವಾಗಿ ಎಲ್ಲೆಲ್ಲೂ ಹಾಹಾಕಾರ ದಾಳಿಗಳು. ಇವಗಳನ್ನು ಕಂಡು ಅಂದಿನ ಸಮಯಕ್ಕೆ ಅವರ ಅನುಭೂತಿ ಏನಿತ್ತು ಎಂಬುದು ಇಂದಿನ ಮತ್ತು ಮುಂದಿನ ಕೆಲವು ಕಗ್ಗಗಳಲ್ಲಿ ಕಾಣಬಹುದು.
11
ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ ।
ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ ॥
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ ।
ಎತ್ತಲಿದಕೆಲ್ಲ ಕಡೆ? - ಮಂಕುತಿಮ್ಮ ॥ ೧೧ ॥
ಭೂಮಿಕೆ ಅದೇ. ಯುದ್ಧ. ಘೋರ ವಿಶ್ವ ಮಹಾ ಯುದ್ಧ. ಇಡೀ ವಿಶ್ವವೇ ಅಲುಗಾಡುವಂಥ ಯುದ್ಧ. ಎಲ್ಲೆಲ್ಲೂ ರಕ್ತಪಾತ. ಎಲ್ಲೆಲ್ಲೂ ಯುದ್ಧದ ಕೂಗು. ಅದು ಈ ಭೂಮಿಗೆ ಆವರಿಸಿಕೊಂಡ ದುರ್ದೈವವೆಂದು ವ್ಯಾಖ್ಯಾನಿಸುತ್ತಾರೆ, ಮಾನ್ಯ ಗುಂಡಪ್ಪನವರು. ಎಲ್ಲೆಲ್ಲೂ ಮೃತ್ಯುವಿನ ತಾಂಡವ. ಯುದ್ಧದಲ್ಲಿ, ತಂದೆಯನ್ನೂ, ಅಣ್ಣನನ್ನೋ, ಮಗನನ್ನೂ, ಮಿತ್ರನನ್ನೋ, ತಮ್ಮನನ್ನೋ, ಭೂಮಿಯನ್ನೋ, ಹುಟ್ಟಿದೂರಲ್ಲಿ ಬಿಟ್ಟ ಬೇರನ್ನೋ, ಆ ಊರಿನ ಮಣ್ಣಿನ ಋಣವನ್ನೋ, ಕಳೆದುಕೊಂಡವರೆ ಬಹಳ ಜನ. ಕಳೆದುಕೊಂಡವರೆಲ್ಲರಿಗೂ ನೋವು. ಕಳೆದುಕೊಳ್ಳದವರಿಗೂ ಕಳೆದುಕೊಂಡವರ ನೋವಿಗಾಗಿ ಸಂತಾಪ. ಒಟ್ಟಾರೆ ಇಡೀ ಭೂಮಿಗೆ ಸೂತಕದ ಭಾವ. ಎಲ್ಲ ಕಡೆಯಿಂದಲೂ ಸಾವಿನ ನಷ್ಟದ ಸಮಾಚಾರ. ಪ್ರತಿನಿತ್ಯ ಈ ಸಮಾಚಾರಗಳನೆಲ್ಲ ಕೇಳಿ ಕೇಳಿ, ಪತ್ರಿಕೆಗಳಲ್ಲಿ ಓದಿ ಓದಿ ತಲೆ ಸುತ್ತುವಂತಾಗುತ್ತದೆ. ಇದಕ್ಕೆಲ್ಲ ಎಂದಿಗಾದರೂ ಕೊನೆಯುಂಟೆ ಎಂದು ಲೋಕ ಶಾಂತಿಗಾಗಿ ಮರುಗುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
12
ಮಾನವರೋ ದಾನವರೋ ಭೂಮಾತೆಯ ತಣಿಸೆ ।
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ॥
ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ ।
ಸೌನಿಕನ ಕಟ್ಟೆಯೇಂ? - ಮಂಕುತಿಮ್ಮ ॥ ೧೨ ॥
ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯನು ತಣಿಸಲು ಅಂದರೆ ದಾಹವಿಂಗಿಸಲು ಕಣ್ಣೇರು ಸುರಿಸುವಬದಲು ರಕ್ತವನ್ನು ಸುರಿಸಿಹರಲ್ಲ! ಈ ಪ್ರಪಂಚದಲ್ಲಿನ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇಡೀ ಪ್ರಪಂಚವೇ ಕಟುಕನ ಜಗುಲಿಯಂತಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
13
ಪುರುಷಸ್ವತಂತ್ರೆಯ ಪರಮಸಿದ್ಧಿಯದೇನು? ।
ಧರಣಿಗನುದಿನದ ರಕ್ತಾಭಿಷೇಚನೆಯೆ? ॥
ಕರವಾಲವನು ಪುಷ್ಪಸರವೆಂದು ಸೆಳೆದಾಡೆ ।
ಪರಿಮಳವ ಸೂಸುವುದೆ? - ಮಂಕುತಿಮ್ಮ ॥ ೧೩ ॥
ಆಗ ನಡೆಯುತ್ತಿದ್ದ ಯುದ್ದ, ಯುದ್ದದಿಂದ ಆಗುತ್ತಿದ್ದ ದುಷ್ಪರಿಣಾಮಗಳು, ಇವುಗಳ ಬಗ್ಗೆ ಮನಕರಗಿ ಭಾವುಕರಾದ ಮಾನ್ಯ ಗುಂಡಪ್ಪನವರು ಶಕ್ತಿಯ ಸ್ವಾತಂತ್ರದ ಸರ್ವೋಚ್ಚ ಗುರಿ, ಈ ಭೂಮಿಗೆ ಪ್ರತಿದಿನವೂ ರಕ್ತದ ಅಭಿಷೇಕವೇ, ಒರೆಯಿಂದ ಕತ್ತಿಯನ್ನು ಹೂವಿನ ಮಾಲೆ ಎಂದು ಎಳೆದರೆ ಅದರಿಂದ ಸುಗಂಧ ಬರಬಹುದೇ ಎನ್ನುತ್ತಾರೆ.