Meaning of life
4
—
8
4
ಏನು ಜೀವನದರ್ಥ? ಏನು ಪ್ರಪಂಚಾರ್ಥ? ।
ಏನು ಜೀವಪ್ರಪಂಚಗಳ ಸಂಬಂಧ? ॥
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು? ।
ಜ್ಞಾನಪ್ರಮಾಣವೇಂ? - ಮಂಕುತಿಮ್ಮ ॥ ೪ ॥
“ಈ ನಮ್ಮ ಜೀವನಕ್ಕೆ ಏನಾದರೂ ಅರ್ಥ ಇದೆಯೇ? ನಾವಿರುವ ಈ ಪ್ರಪಂಚದ ಅರ್ಥವೇನು? ನಮ್ಮ ಮತ್ತು ನಾವು ಇರುವ ಈ ಪ್ರಪಂಚದ ಪರಸ್ಪರ ಸ೦ಬ೦ಧವೇನು? ಇವೆರಡನ್ನೂ ಬೆಸೆದಿರುವ, ನಮ್ಮ ಕಣ್ಣಿಗೆ ಕಾಣದ ಒಂದು ಶಕ್ತಿ ಏನಾದರೂ ಇದೆಯೇ? ಹಾಗಿದ್ದರೆ ಅದೇನು? ಅದು ನಮ್ಮ ವಿಚಾರ ಮತ್ತು ಜ್ಞಾನದ ಪರಿಧಿಯಿಂದ ಮೀರಿದೆಯೇ? ಹಾಗಾದರೆ ಅದು ಏನು? ” ಎಂಬ ಭಾವಗಳನ್ನು ವ್ಯಕ್ತಪಡಿಸುತ್ತಾರೆ ಈ ಕಗ್ಗದಲ್ಲಿ ಮಾನ್ಯ ಶ್ರೀ ಡಿ.ವಿ.ಜಿ ಯವರು.
5
ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? ।
ನಾವರಿಯಲಾರದೆಲ್ಲದರೊಟ್ಟು ಹೆಸರೆ? ॥
ಕಾವನೊರ್ವನಿರಲ್ಕೆ ಜಗದ ಕಥಯೇಕಿಂತು? ।
ಸಾವು ಹುಟ್ಟುಗಳೆನು? - ಮಂಕುತಿಮ್ಮ ॥ ೫ ॥
ದೇವರು ಎನ್ನುವುದು ಏನು? ಅದೇನು ಕತ್ತಲು ಕವಿದ ಗವಿಯೆ? ಎನ್ನುತ್ತಾರೆ ಮಾನನೀಯ ಗುಂಡಪ್ಪನವರು.
6
ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? ।
ಬಗೆದು ಬಿಡಿಸುವರಾರು ಸೊಜಿಗವನಿದನು? ॥
ಜಗವ ನಿರವಿಸಿದ ಕೈಯೊದಾದೊಡೇಕಿಂತು ।
ಬಗೆಬಗೆಯ ಜೀವಗತಿ? - ಮಂಕುತಿಮ್ಮ ॥ ೬ ॥
ಈ ಸೃಷ್ಟಿಯು ಒಗಟೇ? ಈ ಬಾಳಿಗೆ ಅರ್ಥವೇನು ?. ಆದರೆ ಈ ಒಗಟನ್ನು ಬಿಡಿಸುವವರು ಯಾರು. ಈ ಜಗತ್ತನ್ನು ಸೃಷ್ಟಿಮಾಡಿದ ಕೈ ಒಂದೇ ಆದರೆ , ಸೃಷ್ಟಿಯಲ್ಲಿ ಸಮಾನತೆಯೇಕಿಲ್ಲ ? ಬೇರೆ ಬೇರೆಯಾದ ಜೀವಗತಿ ಏಕೆ? ಎನ್ನುವ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳುವ ರೀತಿಯಲ್ಲಿ ಶ್ರೀ ಗುಂಡಪ್ಪನವರು, ನಮ್ಮೆಲ್ಲರ ಮುಂದೆ ಈ ಕಗ್ಗದ ರೂಪದಲ್ಲಿ ಇಟ್ಟಿದ್ದಾರೆ.
7
ಬದುಕಿಗಾರ್ ನಾಯಕರು, ಏಕನೊ ಅನೇಕರೋ? ।
ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ? ॥
ಕುದುರುವುದೆಂತು ಈಯವ್ಯವಸ್ಥ್ರೆಯ ಪಾಡು? ।
ಅದಿಗುದಿಯೆ ಗತಿಯೇನೋ? - ಮಂಕುತಿಮ್ಮ ॥ ೭ ॥
ಈ ಬದುಕಿಗೆ ಯಾರು ನಾಯಕರು? ಒಬ್ಬನೇ ಒಬ್ಬನೋ ಅಥವಾ ಅನೇಕರಿದ್ದಾರೆಯೋ? ಅಥವಾ ಈ ಬದುಕಿಗೆ ನಾಯಕ, ವಿಧಿಯೋ,ಧರ್ಮವೋ,ಅಥವಾ ಅಂಧ ಶ್ರದ್ಧೆಯೋ? ಹಿಂದಿನ ಕಗ್ಗದಲ್ಲಿ ಉಲ್ಲೇಖಿಸಿರುವ ಅವ್ಯವಸ್ಥೆ ಸರಿಯಾಗುವುದೋ ಇಲ್ಲವೋ? ಅಥವಾ ಇವೆಲ್ಲರದರ ವಿಚಾರದ ತಳಮಳದಲ್ಲಿಯೇ ನಾವು ಯಾವಾಗಲೂ ಇರಬೇಕೆ? ಈ ರೀತಿಯ ಪ್ರಶ್ನೆಗಳನ್ನು ಸನ್ಮಾನ್ಯ ಡಿ ವಿ ಗುಂಡಪ್ಪನವರು ತಮ್ಮನ್ನೇ ತಾವು ಕೇಳಿಕೊಳ್ಳುತ್ತಾ, ಓದುಗರ ಮುಂದೆ ಪ್ರಸ್ತಾಪಿಸುತ್ತಾರೆ.
8
ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? ।
ಭ್ರಮಿಪುದೇನಾಗಾಗ ಕರ್ತೃವಿನ ಮನಸು? ॥
ಮಮತೆಯುಳ್ಳವನಾತನಾದೊಡೀ ಜೀವಗಳು ।
ಶ್ರಮಪಡುವುವೇಕಿಂತು? - ಮಂಕುತಿಮ್ಮ ॥ ೮ ॥
ಇಲ್ಲಿ ಗುಂಡಪ್ಪನವರು ಕೇಳುವ ಪ್ರಶ್ನೆ ಹೀಗಿದೆ” ಈ ಭಗವಂತನ ಸೃಷ್ಟಿಯಲ್ಲಿ ಒಂದು ಕ್ರಮ ಅಥವಾ ಗುರಿ ಏನಾದರೂ ಇದೆಯೇ? ಈ ಸೃಷ್ಟಿಕರ್ತನ ಮನಸ್ಸು ಏಕೆ ಆಗಾಗ ವಿಚಲಿತವಾಗಿ ಎಲ್ಲೆಲ್ಲೋ ಹರಿದಾಡುತ್ತದೆ. ?ತಾನು ಸೃಷ್ಟಿಸಿದ ಜೀವಿಗಳ ಮೇಲೆ ಅವನಿಗೆ ಪ್ರೀತಿ ವಾತ್ಸಲ್ಯಗಳು ಇರುವುದಾದರೆ ಈ ಜೀವಿಗಳು ಏತಕ್ಕಾಗಿ ಈ ರೀತಿಯ ಕಷ್ಟಗಳನ್ನು ಅನುಭವಿಸುತ್ತವೆ?