Human logic
539
—
543
539
ಬರಿಯ ಬುದ್ಧಿವಿಮರ್ಶೆಗರಿದು ಜೀವನತತ್ತ್ವ ।
ಪರಿಶೋಧಿಸುವರಾರು ಬುದ್ಧಿಋಜುತೆಯನು? ॥
ಸ್ಫುರಿಸುವುದದೆಂದೊ ತಾನೇ ಮಿಂಚುಬಳ್ಳಿವೊಲು ।
ಪರತತ್ತ್ವ ಮನದೊಳಗೆ - ಮಂಕುತಿಮ್ಮ ॥ ೫೩೯ ॥
ಕೇವಲ ಬುದ್ಧಿಯ ತರ್ಕಕ್ಕೆ ಸಿಗುವುದಿಲ್ಲ ಜೀವನದ ಸತ್ವ. ಬುದ್ಧಿಯ ಪ್ರಾಮಾಣಿಕತೆಯನ್ನು ಪರಿಶೋಧಿಸುವವರಾರು? ಪ್ರತಿಯೊಬ್ಬನಿಗೂ ಆ ಪರತತ್ವವು ಮತ್ತು ಆ ಪರತತ್ವದ ಸತ್ವವು ಎಂದೋ ಒಂದು ದಿನ ತಾನೇ ತಾನಾಗಿ ಒಂದು ಮಿಚ ಬಳ್ಳಿಯಂತೆ ಸ್ಫುರಿಸುವುದು ಎಂದು ಒಂದು ಅದ್ಭುತ ಸತ್ಯವನ್ನು ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
540
ನರವಿವೇಕವದೇನು ಬರಿಯ ಮಳೆ ನೀರಲ್ಲ ।
ಕೆರೆಯನೀರ್ ಊರ ಮೈಸೋಂಕುಗಳ ಬೆರಕೆ ॥
ಧರೆಯ ರಸವಾಸನೆಗಳಾಗಸದ ನಿರ್ಮಲದ ।
ವರವ ಕದಡಾಗಿಪುವು - ಮಂಕುತಿಮ್ಮ ॥ ೫೪೦ ॥
ಮನುಷ್ಯನ ವಿವೇಕವು ಮಳೆಯ ನೀರಿನಂತೆ ಶುದ್ಧವಲ್ಲ. ಕೆರೆಯ ನೀರಲ್ಲಿ ಊರ ಜನರ ಮೈಲಿಗೆಯಲ್ಲ ಕಲೆತಂತೆ. ಪರಮಾತ್ಮನ ವರದಂತೆ ಧರೆಗಿಳಿದ ನಿರ್ಮಲ ವರ್ಷಧಾರೆ ಭೂ ಸ್ಪರ್ಶವಾದೊಡನೆ ಭೂಮಿಯ ಮೇಲಿನ ರಸ ಮತ್ತು ಗಂಧಗಳ ಸಂಪರ್ಕದಿಂದ ಮಲಿನವಾಗುವಂತೆ, ಮನುಷ್ಯನ ವಿವೇಕವೂ ಸಹ ಇಲ್ಲಿನ ರಸ ವಾಸನೆಗಳ ಪರಿಣಾಮಗಳಿಂದ ತನ್ನ ಶುದ್ಧತೆಯನ್ನು ಉಳಿಸಿಕೊಳ್ಳಲಾಗದೆ ಮಲಿನವಾಗುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
541
ಪ್ರಾಕ್ತನದ ವಾಸನೆ ಮನಕೆ ಮೊದಲಿನ ಮಂತ್ರಿ ।
ಯುಕ್ತಿಗಳ ತನಗೊಪ್ಪುವಂತೆ ತಿರುಗಿಪುದು ॥
ಸೂಕ್ತವೆನಿಪುದು ಸಹಜರುಚಿ ತನ್ನ ತರ್ಕವನೆ ।
ಗುಪ್ತದೊಳು ಕುಟಿಲವಿದು - ಮಂಕುತಿಮ್ಮ ॥ ೫೪೧ ॥
ನಮ್ಮ ಪೂರ್ವ ಜನ್ಮದ ವಾಸನೆಗಳೇ, ನಮ್ಮ ಮನಸ್ಸು ಬುದ್ಧಿಗಳಿಗೆ, ತನಗೆ ಅನುಗುಣವಾಗಿ ಸಲಹೆಗಳನ್ನು ನೀಡುವ ಮಂತ್ರಿಯಿದ್ದ ಹಾಗೆ. ಈ ವಾಸನೆಗಳೇ ತನ್ನ ಸಹಜವಾದಂತಹ ಅಭಿರುಚಿಗೆ ಸರಿಯಾದ ತರ್ಕವನ್ನು ಮಂಡಿಸಿ ತನಗೆ ಹೇಗೆ ಬೇಕೋ ಹಾಗೆ ನಮ್ಮನ್ನು ತಿರುಗಿಸಿಕೊಳ್ಳುತ್ತದೆ. ಇದು ನಮ್ಮನ್ನು ಅವುಗಳಿಂದ ಮುಕ್ತರಾಗಿ ಪರತತ್ವದೆಡೆಗೆ ಹೋಗದಂತೆ ತಡೆಯುವ ಕುಟಿಲತೆ ಎಂದು ನಮ್ಮ ಪೂರ್ವ ವಾಸನೆಗಳಿಗೂಮತ್ತು ಇಂದಿನ ನಮ್ಮ ಬದುಕಿಗೂ ಇರುವ ಸಂಬಂಧವನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
542
ಆಶೆ ಮಂಥರೆ, ನರವಿವೇಚನೆಯೆ ಕೈಕೇಯಿ ।
ಬೀಸೆ ಮನದುಸಿರು ಮತಿದೀಪವಲೆಯುವುದು ॥
ವಾಸನೆಗಳನುಕೂಲ ಸತ್ಯತರ್ಕಕೆ ಶೂಲ ।
ಶೋಷಿಸಾ ವಾಸನೆಯ - ಮಂಕುತಿಮ್ಮ ॥ ೫೪೨ ॥
ನಮ್ಮ ಮನದಲ್ಲಿ ಉದ್ಭವವಾಗುವ ಆಸೆಗಳನ್ನು ಮಂಥರೆಗೆ ಮತ್ತು ಮನುಷ್ಯರ ವಿವೇಚನೆಯನ್ನು ಕೈಕೇಯಿಗೆ ಹೋಲಿಸಿದ್ದಾರೆ ಮಾನ್ಯಗುಂಡಪ್ಪನವರು. ಮನಸ್ಸಿನಲ್ಲಿ ಉದ್ಭವವಾಗುವ ಆಸೆಗಳು ತನ್ನ ಹೂಂಕಾರದ ರಭಸದಿಂದ ಮತಿ ಎಂದರೆ ವಿವೇಕವನ್ನು ತಲ್ಲಣಗೊಳಿಸುತ್ತದೆ. ನಮ್ಮ ಪೂರ್ವ ವಾಸನೆಗಳಿಗನುಕೂಲವಾಗುವಂತೆ ಓಲಾಡುವ ನಮ್ಮ ಆಸೆಗಳ ವಿಶ್ಲೇಷಣೆ ಮಾಡಿದರೆ, ಸತ್ಯಕ್ಕೆ ಇರಿತವಾಗುತ್ತದೆ. ಹಾಗಾಗಿ ಸತ್ಯದ ಪಥದಿಂದ ದೂರಾಗಿಸುವಂತಹ ಈ ವಾಸನೆಗಳನ್ನು ನಿನ್ನ ಸ್ವಭಾವ ಮತ್ತು ಗುಣದಿಂದ ದೂರಾಗಿಸು ಅಥವಾ ಇಲ್ಲವಾಗಿಸು ಎಂದು ಒಂದು ಸೂಕ್ತ ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
543
ಭಾವದಾವೇಶದಿಂ ಮನವಶ್ವದಂತಿರಲಿ ।
ಧೀವಿವೇಚನೆಯದಕೆ ದಕ್ಷರಾಹುತನು ॥
ತೀವಿದೊಲವಿನ ದಂಪತಿಗಳಾಗಿ ಮನಬುದ್ಧಿ ।
ಜೀವಿತವು ಜೈತ್ರಕಥೆ - ಮಂಕುತಿಮ್ಮ ॥ ೫೪೩ ॥
ಭಾವದ ಆವೇಶದಲ್ಲಿ ಮನಸ್ಸು ಕುದುರೆಯಂತಿರಲಿ. ನಮ್ಮ ಬುದ್ಧಿ ಮತ್ತು ವಿವೇಕಗಳು ದಕ್ಷತೆಯ ಸವಾರನಾಗಲಿ. ಮನಸ್ಸು ಬುದ್ಧಿಗಳು ತುಂಬಿದ ಒಲವಿನ ದಂಪತಿಗಳಂತಿದ್ದರೆ ನಮ್ಮ ಬದುಕೇ ಯಶಸ್ಸಿನ ಕಥೆಯಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.ನಮ್ಮ ಮನಸ್ಸು ಸಾವಿರಾರು ಭಾವಗಳ ಆಗರ. ಸಮುದ್ರದ ಅಲೆಗಳಂತೆ ಈ ಭಾವಗಳು ಕ್ಷಣಕ್ಷಣಕ್ಕೆ ಮೇಲೆ ಬರುತ್ತವೆ ಮತ್ತೆ ಇಳಿಯುತ್ತವೆ. ಎಷ್ಟೋ ಭಾವಗಳ ಏರಿಳಿತಗಳಿಗೆ ಕಾರಣ ನಮಗೆ ಅರ್ಥವಾಗುವುದಿಲ್ಲ. ಈ ಭಾವಗಳ ಆವೇಶದಿಂದ ಮನಸ್ಸು ವಿಚಲಿತವಾಗಿ ಕುಣಿಯುತ್ತದೆ. ಆಸೆ ನಿರಾಸೆಗಳ, ರಾಗ ದ್ವೇಷಗಳ, ಕೋಪ ತಾಪಗಳ, ಕರುಣೆ ವಿಹ್ವಲತೆಗಳ, ಪ್ರೇಮ ಪ್ರೀತಿಗಳ ಹತ್ತು ಹಲವಾರು ಭಾವಗಳು ಮನಸ್ಸಿನ ಫಟಲದಲ್ಲಿ ಕುಣಿಯುತ್ತವೆ. ಇವುಗಳನ್ನು ಹತೋಟಿಯಲ್ಲಿಡದೆ ಹರಿಬಿಟ್ಟರೆ ಅನಾಹುತವಾಗುತ್ತದೆ ಮತ್ತು ಬದುಕು ದುರ್ಭರವಾಗುತ್ತದೆ. ಹಾಗಾಗಿ ನಮ್ಮ ಬುದ್ಧಿ ಮತ್ತು ವಿವೇಕ ಈ ಮನಸ್ಸಿನಲ್ಲಿ ಕುಣಿಯುವ ಭಾವನೆಗಳ ಕುದುರೆಗೆ ದಕ್ಷತೆಯ ಸವಾರನಂತಾಗಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.