Burden of freedom
534
—
538
534
ಹರಡುವುದು ಸಾಜ ವಾಯುಗೆ ಸೈಸದದು ತಡೆಯನ್ ।
ಉರುಳಿಪುದದೆಲ್ಲವನು ತಡೆಗಳಿಲ್ಲದಿರೆ ॥
ನರನ ಸ್ವತಂತ್ರಗತಿಯಂತು ಹಿತಮಿತವಿರಲು ।
ಅರಸೊ ಮಿತಿಯಾಯತಿಯ - ಮಂಕುತಿಮ್ಮ ॥ ೫೩೪ ॥
ವಿಶಾಲವಾಗಿ ಹರಡಿಕೊಳ್ಳುವುದು ಗಾಳಿಗೆ ಸಹಜ ಗುಣ. ಅದರ ಹರಡುವಿಕೆಗೆ ಅಡ್ಡಿಗಳನ್ನು ಅದು ಸಹಿಸುವುದಿಲ್ಲ. ಹಾಗೆ ತನಗೆ ಅಡ್ಡಿಯಾಗಿ ಬಂದದ್ದನ್ನೆಲ್ಲಾ ಉರುಳಿಸಿ ತಳ್ಳಿಬಿಡುತ್ತದೆ. ಬದುಕಿನ ಗತಿಗೆ ಅಡೆ ತಡೆಗಳಿಲ್ಲದಿದ್ದರೆ ಮನುಷ್ಯನ ಬದುಕಿನ ಗತಿಯೂ ಸಹ ಗಾಳಿಯಂತೆಯೇ ಸಿಕ್ಕ ಸಿಕ್ಕದ್ದನ್ನೆಲ್ಲಾ ಉರುಳಿಸಿಕೊಂಡು ಹೋಗುವಂತಾಗುತ್ತದೆ. ಮಿತಿಯಿರಲು ಬದುಕು ಹಿತ. ಹಾಗಾಗಿ ನೀನು ನಿನ್ನ ಬದುಕಿನ ವೈಶಾಲ್ಯತೆಯ ಮಿತಿಯನ್ನು ಅರಿತುಕೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
535
ನೀರ ನೆರೆ ತನ್ನೆದುರಿನಣೆಕಟ್ಟನೊದೆಯುವುದು ।
ಊರನದು ಕೊಚ್ಚುವುದು ಬದಿಯ ಕಟ್ಟದಿರೆ ॥
ಏರಿಗಳನಿಕ್ಕೆಲದಿ ನಿಲಿಸೆ ಹರಿವುದು ಸಮನೆ ।
ಪೌರುಷದ ನದಿಯಂತು - ಮಂಕುತಿಮ್ಮ ॥ ೫೩೫ ॥
ನದಿಯ ಪ್ರವಾಹ ಹೊಮ್ಮಿ ಬಂದರೆ ಅದು ಅಣೆಕಟ್ಟನ್ನು ಒಡೆಯುವುದು. ತನ್ನ ಹರಿವಿನ ಹಾದಿಯಲ್ಲಿ ಬರುವ ಊರುಗಳನೆಲ್ಲ ಕೊಚ್ಚಿಕೊಂಡು ಹೋಗಬಹುದು. ಆದರೆ ಅದೇ ನದಿಗೆ ಎರಡೂ ಬದಿಯಲ್ಲಿ ಕಟ್ಟೆಗಳನ್ನು ಕಟ್ಟಿದರೆ ಅದು ಸಮನಾಗಿ ಹರಿದು ತನ್ನ ಗಮ್ಯವನ್ನು ಕಂಡುಕೊಳ್ಳುತ್ತದೆ. ನದಿಯ ಶಕ್ತಿಯಷ್ಟೇ ಅಲ್ಲ ಮಿಕ್ಕ ಎಲ್ಲಾ ಶಕ್ತಿಗಳೂ ಈ ನದಿಯ ಪ್ರವಾಹದ ಶಕ್ತಿಯಂತೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
536
ಎಸಳಿನಡಿ, ಗಿಡದ ಬಿಗಿ, ಮೇಲೆ ಗಾಳಿಯ ಸರಸ ।
ಕುಸುಮದ ಕ್ಷೇಮವಾ ಬಿಗಿತ ಬಿಡುತೆಗಳಿಂ ॥
ಕುಶಲ ಸೌರಭವ ನಿರ್ಯತ್ನ ಸ್ವತಂತ್ರದಿಂ ।
ಪಸರಿಪಾ ನಯ ಸುಖವೊ - ಮಂಕುತಿಮ್ಮ ॥ ೫೩೬ ॥
ಹೂವಿನ ಎಸಳುಗಳನ್ನು ತೊಟ್ಟಿನ ಮೂಲಕ ಗಿಡವು ಬಿಗಿಯಾಗಿ ಹಿಡಿದುಕೊಂಡು ಇರುತ್ತದೆ. ಹೀಗೆ ಹೂವಿನ ಕ್ಷೇಮಕ್ಕಾಗಿ ಗಿಡದ ಭದ್ರಹಿಡಿತಕ್ಕೆ ಒಳಪಟ್ಟ ಹೂವಿನ ಮೇಲೆ ಗಾಳಿ ಸರಸವಾಡುತ್ತದೆ ಮತ್ತು ಹೂವು ಗಿಡದ ಹೊರಗಿದ್ದರೂ ಅದರ ಹಿಡಿದಲ್ಲಿದ್ದುಕೊಂಡೆ ತನ್ನ ಸೌರಭವನ್ನು ಅಪ್ರಯತ್ನವಾಗಿ ಹೊರಸೂಸುವುದು ಸುಖ. ನಮ್ಮ ಬದುಕೂ ಹಾಗೆಯೇ ನಮ್ಮ ಮಿತಿಗಳ ಬಿಗಿ ಹಿಡಿತದಲ್ಲಿ ಇದ್ದುಕೊಂಡೇ ಒಳಿತನ್ನು ಪಸರಿಸುವ ಕೆಲಸ ನಮ್ಮಿಂದ ಆಗಬೇಕು ಎಂದು ಒಂದು ಆಶಯವನ್ನು ಮಾನ್ಯ ಗುಂಡಪ್ಪನವರು ವ್ಯಕ್ತಪಡಿಸಿದ್ದಾರೆ ಈ ಮುಕ್ತಕದಲ್ಲಿ.
537
ತರಣಿಶಶಿಪಥಗಳನು, ಧರೆವರುಣಗತಿಗಲನು ।
ಮರುದಗ್ನಿವೇಗಗಳ ನಿಯಮಿಸಿಹ ದಕ್ಷನ್ ॥
ನರನರಸಿಕೊಳಲಿ ದಾರಿಯ ತನಗೆ ತಾನೆಂದು ।
ತೊರೆದನೇತಕೆ ನಮ್ಮ? - ಮಂಕುತಿಮ್ಮ ॥ ೫೩೭ ॥
ಆ ದಕ್ಷನಾದ, ಸರ್ವಶಕ್ತನಾದ ಪರಮಾತ್ಮನು ತಾನೇ ಸೃಷ್ಟಿಸಿದ ಸೂರ್ಯ, ಚಂದ್ರ, ಭೂಮಿ, ಮಳೆ, ಗಾಳಿ,ಅಗ್ನಿ ಮುಂತಾದವುಗಳ ವೇಗವನ್ನು ನಿಯಂತ್ರಿಸುತ್ತಿದ್ದಾನೆ. ಆದರೆ ಮನುಷ್ಯರಿಗೆ ಮಾತ್ರ ತಮ್ಮ ತಮ್ಮ ವೇಗವನ್ನು ತಾನೇ ನಿಯಂತ್ರಿಸಿಕೊಳ್ಳಲಿ ಎಂದು ಏಕೆ ಬಿಟ್ಟನೋ ಎಂದು ಒಂದು ಸುಂದರ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳುತ್ತಾ ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
538
ತನ್ನ ಬೆವರಿನ ಕೊಳದಿ ತಾಂ ಮುಳುಗಿ ತೇಲುತ್ತೆ ।
ಧನ್ಯನಾನೆನ್ನುವನದೊರ್ವ ಸ್ವತಂತ್ರನ್ ॥
ಪುಣ್ಯತೀರ್ಥದೊಳಿಳಿದು ಕರಗಲ್ ಸ್ವತಂತ್ರ ತಾನ್ ।
ಎನ್ನುವವನಿನ್ನೊರ್ವ - ಮಂಕುತಿಮ್ಮ ॥ ೫೩೮ ॥
ತನ್ನ ದುಡಿಮೆಯನ್ನು ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿಯೇ ಮಾಡುತ್ತಾ ತನ್ನ ಕಷ್ಟ ಸುಖಗಳ ಸುಳಿಯಲ್ಲೇ ತಾನೇ ಮುಳುಗಿ ತೇಲುತ್ತಾ ತನ್ನ ಜೀವನ ಸಾರ್ಥವಾಯಿತು ಎಂದು ನೆನೆಯುವ ಒಬ್ಬನಾದರೆ ತನ್ನ ಕುಟುಂಬವನ್ನು ಪಾಲಿಸುತ್ತಾ ಈ ಜಗತ್ತೇ ಒಂದು ಕುಟುಂಬ ಅಥವಾ ಪುಣ್ಯಕ್ಷೇತ್ರ ಅಥವಾ ಪುಣ್ಯತೀರ್ಥ ಎಂದು ಸಮಾಜಾಭಿಮುಖಿಯಾಗಿ ತನ್ನ ಹೆಸರನ್ನೂ ಉಳಿಸದೆ ಕರಗಿಹೋಗುವವನು ಮತ್ತೊಬ್ಬ. ಹೀಗೆ ಜಗತ್ತಿನಲ್ಲಿ ಇರುವ ನಾನಾ ರೀತಿಯ ಜನಗಳ ವಿಶ್ಲೇಷಣೆಯನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.