Kagga Logo

Passion, compassion, peace

454

458

454

ಪರಿಪರಿಯ ವಿಶ್ವಪ್ರಕೃತಿಶಕ್ತಿತೇಜಗಳು ।
ಕೆರಳಿಸಲು ನರಹೃದಯರಭಸಗಳನದರಿಂ ॥
ಪೊರಮಡುವ ಸಂಮೋಹಧೀರಗಂಭೀರಗಳ ।
ಸರಸತೆಯೆ ಸುಂದರವೊ - ಮಂಕುತಿಮ್ಮ ॥ ೪೫೪ ॥

ಜಗತ್ತಿನಲ್ಲಿನ ಮೂಲ ಶಕ್ತಿ ಎಂದರೆ ಪರಮಾತ್ಮ ಶಕ್ತಿ, ಬೇರೆ ಬೇರೆ ವಿಧದಲ್ಲಿ ಪ್ರಕಟಗೊಂಡು ಮನುಷ್ಯನ ಹೃದಯದಲ್ಲಿ ಮೋಹಕ, ಧೀರ, ಗಂಭೀರಗಳಂತಹ ಚಿತ್ರವಿಚಿತ್ರ ಭಾವನೆಗಳನ್ನು ಕೆರಳಿಸಿ, ಆನಂದವನ್ನು ಪಡೆಯಲುದ್ಯುಕ್ತನಾದಾಗ ಈ ಶಕ್ತಿಗಳೊಡನೆ ಇವನು ನಡೆಸುವ ಸರಸವೇ ಒಂದು ಸುಂದರತೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

455

ಸುಂದರದ ರಸ ನೂರು; ಸಾರವದರೊಳು ಮೂರು ।
ಹೊಂದಿಪ್ಪುವವು ಮೋಹ ಕರುಣೆ ಶಾಂತಿಗಳ ॥
ಒಂದರಿಂದೊಂದು ಬೆಳೆಯಾದಂದು ಜೀವನವು ।
ಚೆಂದಗೊಂಡುಜ್ಜುಗವೊ - ಮಂಕುತಿಮ್ಮ ॥ ೪೫೫ ॥

ಜಗತ್ತಿನ ವಸ್ತುಗಳಲ್ಲಿನ ನೂರಾರು ‘ರಸ’ಗಳಲ್ಲಿ ‘ಸಾರ’ವಿರುವುದು ಮೂರು . ಅವೇ ‘ ಮೋಹ, ಕರುಣೆ ಮತ್ತು ಶಾಂತಿ’. ಈ ಮೂರೂ ಸಾರಗಳು ಒಂದಕ್ಕೊಂದು ಪೂರಕವಾಗಿದ್ದು ಒಂದು ಮತ್ತೊಂದರ ಬೆಳವಣಿಗೆಗೆ ಮೂಲವಾದರೆ ನಮ್ಮ ಜೀವನವು ಚೆಂದಗೊಳ್ಳುತದೆ ಎಂದು ಸಾರಯುಕ್ತವಾದ ಬದುಕಿನ ಪರಿಚಯವನ್ನು ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ ಮಾಡಿದ್ದಾರೆ.

456

ಪಿಡಿ ಗಳಿಸು ಭುಜಿಸೊಡೆಯನಾಗೆನ್ನುವುದು ಮೋಹ ।
ಕೊಡು ಸಲಿಸು ಸೇವೆಗೈಯೆನ್ನುವುದು ಕರುಣೆ ॥
ಬಿಡು ನೀನು ನಾನುಗಳ, ವಿಶ್ವಾತ್ಮಪದವನೀ- ।
ನಡರೆನ್ನುವುದು ಶಾಂತಿ - ಮಂಕುತಿಮ್ಮ ॥ ೪೫೬ ॥

ಹಿಡಿ, ಗಳಿಸು, ಅನುಭವಿಸು, ಒಡೆಯನಾಗು ಎಂದು ‘ಮೋಹ’ ನಮ್ಮನ್ನು ಪ್ರೇರೇಪಿಸುತ್ತದೆ. ‘ಕರುಣೆ’ ಕೊಡು, ಸಲ್ಲಿಸು, ಸೇವೆಮಾಡು, ಎನ್ನುವ ಭಾವಗಳನ್ನು ಮನದಲ್ಲಿ ಮೂಡಿಸುತ್ತದೆ. ನೀನು ಮತ್ತು ನಾವು ಎನ್ನುವ ಭೇದವನ್ನು ತೊರೆದು ವಿಶ್ವಾತ್ಮಭಾವವನ್ನು ಪಡೆ ಎಂದು ‘ಶಾಂತಿ’ ಭೋದಿಸುತ್ತದೆ ಎಂದು, ಮೋಹ ಕರುಣೆ ಮತ್ತು ಶಾಂತಿಯ ಸ್ವಭಾವಗಳನ್ನು ವಿಸ್ತರಿಸಿ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

457

ಚಾರುದೃಶ್ಯಂಗಳಿಂ ಪ್ರೀತಿ ಹೃದಯವಿಕಾಸ ।
ಕ್ರೂರದೌಷ್ಟ್ಯಂಗಳಿಂ ವೀರಾನುಕಂಪ ॥
ಭೈರವಾದ್ಭುತಗಳಿಂ ಮೌನದಂತರ್ಮನನ ।
ದಾರಿಯುದ್ಧಾರಕಿವು - ಮಂಕುತಿಮ್ಮ ॥ ೪೫೭ ॥

ಒಳ್ಳೆಯ ಸುಂದರವಾದ ದೃಶ್ಯಗಳನ್ನು ನೋಡಿದರೆ ಮನಸ್ಸು ಪ್ರಫುಲ್ಲವಾಗುತ್ತದೆ. ಕ್ರೌರ್ಯ ಮತ್ತು ದುಷ್ಟತನವನ್ನು ನೋಡಿದರೆ, ಮನದಲ್ಲಿ ವೀರಾವೇಶ ಉಕ್ಕುತ್ತದೆ ಅಥವಾ ಅನುಕಂಪ ಉಂಟಾಗುತ್ತದೆ. ಭೀಕರ ಅಥವಾ ಅದ್ಭುತಗಳನ್ನು ಕಂಡಾಗ ಅಂತರ್ಮನ ಮೌನ ತಳೆದು ಚಿಂತನೆಗೊಳಗಾಗುತ್ತದೆ. ಈ ರೀತಿಯ ಅನುಭವಗಳು ಮಾನವನ ಉದ್ಧಾರಕ್ಕೆ ಮಾರ್ಗಗಳು ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು.

458

ಹಿಂದಣದರುಳಿವಿರದು, ಮುಂದಣದರುಸಿರಿರದು ।
ಒಂದರೆಕ್ಷಣ ತುಂಬಿ ತೋರುವುದನಂತ ॥
ಒಂದೆ ಕಣ್ಣೊಂದೆ ಗುರಿಯೊಂದೆ ಮೈಮನಮರೆತ ।
ಸುಂದರದ ಲೋಕವದು - ಮಂಕುತಿಮ್ಮ ॥ ೪೫೮ ॥

ಹಿಂದಿನದರ ಉಳಿವಿರದು, ಮುಂದಿನಿದರ ಸುಳಿವಿರದು, ರಸಾಸ್ವಾಧನೆಮಾಡುವಾಗ, ನೋಟ ಗಮನ ಎಲ್ಲದರೊಳಗೂ ಒಂದು ಘಳಿಗೆ ಆ ರಸದ ಅನುಭವವೇ ತುಂಬಿ ಮೈ ಮನವನ್ನು ಮರೆತಂತೆ ಆಗುತ್ತದೆ ಮತ್ತು ಅಲ್ಲಿರುವಾಗ ಅದೊಂದು ಸುಂದರ ಲೋಕದಂತೆ ಕಾಣುತ್ತದೆ ಎಂದು ರಸಾಸ್ವಾಧನೆಯ ಮಾರ್ಗವನ್ನು ವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು.