Duality is interesting
449
—
453
449
ಸೌಂದರ್ಯದಾಲಯ ಬರಿ ದ್ವಂದ್ವವೇನಲ್ಲ ।
ದ್ವಂದ್ವದೊಳಗನುವು; ಅದು ಪರಿಮಾಣದುಚಿತ ॥
ಸಂಧಾನರೀತಿಯದು; ಸಹಕಾರ ನೀತಿಯದು ।
ಸಂದರ್ಭಸಹಜತೆಯೊ - ಮಂಕುತಿಮ್ಮ ॥ ೪೪೯ ॥
ಕೇವಲ ದ್ವಂದ್ವಗಳು ಇದ್ದರೆ ಸಾಲದು, ಅವು ಒಂದಕ್ಕೊಂದು ಅನುಗುಣವಾಗಿರಬೇಕು, ಪರಿಮಾಣಗಳ ಔಚಿತ್ಯವನ್ನು ಹೊಂದಿರಬೇಕು, ಒಂದಕ್ಕೊಂದು ಸಮರ್ಪಕವಾಗಿ ಅನುಸಂಧಾನದಿಂದಿರಬೇಕು ಮತ್ತು ಪರಸ್ಪರ ಸಹಕಾರಯುತವಾಗಿರಬೇಕು. ಈ ಎಲ್ಲ ರೀತಿಯ ಸಂದರ್ಭಗಳು ಇದ್ದಾಗ ಅದು ನಿಜವಾದ ಸೌಂದರ್ಯ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
450
ಸೌಂದರ್ಯದೊಳ್ ದ್ವಂದ್ವ, ಬಾಂಧವ್ಯದೊಳ್ ದ್ವಂದ್ವ ।
ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ ॥
ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ ।
ಬಂಧಮೋಚನ ನಿನಗೆ - ಮಂಕುತಿಮ್ಮ ॥ ೪೫೦ ॥
ಈ ಜಗತ್ತಿನಲ್ಲಿರುವ ಎಲ್ಲ ಸೌಂದರ್ಯ ಮತ್ತು ಬಾಂಧವ್ಯಗಳಲ್ಲಿ ದ್ವಂದ್ವಗಳಿವೆ. ಈ ಜಗತ್ತಿನ ಸಹವಾಸವೆಂದರೆ, ದ್ವಂದ್ವದಲ್ಲಿ ಬಿದ್ದೆವು ಎಂದರ್ಥ. ಎಂದು ನಾವು ಈ ದ್ವಂದ್ವಗಳನ್ನು ಮೀರಿ ಮುಂದೆ ಹೋಗುತ್ತೇವೆಯೋ ಅಂದೇ ನಮಗೆ ಬಂಧ ವಿಮೋಚನೆ ಎಂದು ಸುಂದರ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
451
ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ ।
ಶೈಲದಚಲತೆಯಿರಲು ಝರಿಯ ವೇಗ ಸೊಗ ॥
ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಭು ।
ವೈಲಕ್ಷಣದೆ ಚೆಂದ - ಮಂಕುತಿಮ್ಮ ॥ ೪೫೧ ॥
ವಿಶಾಲವಾದ ಅಕಾಶವಿರಲು ಅಲ್ಲಿ ಹರಡಿರುವ ನಕ್ಷತ್ರ ಸಮೂಹ ಚೆಂದ, ಅಲುಗಾಡದೆ ನಿಂತಿರುವ ಬೆಟ್ಟಗಳಿರುವಾಗ ಅಲ್ಲಿಂದ ಹರಿವ ನೇರ ಜಲಪಾತ ನೋಡಲು ಚೆಂದ, ಬದುಕು ಬಯಲಂತೆ ಇರಲು ನಾವಿರುವ ಮನೆಯೇ ನಮಗೆ ಸೊಗಸು, ಹಿತ. ಹೀಗೆ ವಿಭಿನ್ನತೆಯಿಂದ ಕೂಡಿದ ಜಗತ್ತೇ ನಮಗೆ ಚೆಂದವಾಗಿ ಕಾಣುತ್ತದೆ ಎಂದು ಮಾನ್ಯ ಗುಂಡಪ್ಪನವರು ಉಲ್ಲೇಖ ಮಾಡಿದ್ದಾರೆ ಈ ಮುಕ್ತಕದಲ್ಲಿ.
452
ನೀಳುಗೆರೆ ಬಳುಬಳುಕೆ ಕಡಲತೆರೆಯೊಯ್ಯಾರ ।
ತಾಳಲಯ ಸೇರೆ ರಾಗದ ನಾಟ್ಯ ಧಾಟಿ ॥
ಗೋಳದ ಜ್ವಾಲೆಯಿಂ ಗಗನಪಟ ಸಿಂಗಾರ ।
ವೈಲಕ್ಷಣದೊಳಿಂಬು - ಮಂಕುತಿಮ್ಮ ॥ ೪೫೨ ॥
ಕಡಲಂಚಿನಲ್ಲಿ ಕಾಣುವ ನೇರ ನೇರವಾದ ಗೆರೆ ಹೇಗೆ ಕಡಲಲ್ಲಿ ತೆರೆಯೆದ್ದಾಗ ಒಂದು ಬಾರಿ ಬಳುಕಿ ನೋಡುಗರಿಗೆ ಆನಂದವನ್ನು ನೀಡುತ್ತದೋ, ಹೇಗೆ ರಾಗದ ಜೊತೆ ತಾಳ ಸೇರಿ ಲಯವಾಗಿ ನಾಟ್ಯಧಾಟಿಯಿಂದ ಮನವನ್ನು ರಂಜಿಸುತ್ತದೆಯೋ, ಪ್ರತಿಯೊಂದೂ ಉರಿವ ಅಗ್ನಿ ಗೋಳಗಳಾಗಿದ್ದರೂ ಆಗಸದ ಪಟಲದಲ್ಲಿ ಉದ್ದಕ್ಕೂ ಹರಡಿ ನಕ್ಷತ್ರಗಳು, ಒಂದು ಸುಂದರ ಚಿತ್ತಾರವನ್ನು ಮೂಡಿಸಿದೆಯೋ, ಹಾಗೆ ವಿಲಕ್ಷಣವಾದ ಪ್ರತಿಯೊಂದೂ ಈ ಜಗತ್ತನ್ನು ಸುಂದರವಾಗಿಸಲು ಇಂಬು ನೀಡುತ್ತಿವೆ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
453
ತಾಯೊ ತಂಗಿಯೊ ಎನಿಪ ಶುಚಿಯ ಸೌಮ್ಯದ ಸೊಬಗು ।
ಪ್ರೇಯಸಿಯ ಕರೆವೊಲಾತುರವಡಿಪ ಬೆಡಗು ॥
ಈಯೆರಡು ಸಮದ ರುಚಿ ನಿನ್ನಿನಿಬ್ಬಗೊಳಿಸೆ ।
ಧ್ಯೇಯ ನಿನಗಾವುದೆಲೊ? - ಮಂಕುತಿಮ್ಮ ॥ ೪೫೩ ॥
ತಾಯಿ ಮತ್ತು ತಂಗಿಯರ ಸೌಂದರ್ಯವನ್ನು ನೋಡುವ ಬಗೆ ಬೇರೆ ಮತ್ತು ತುಡಿತ ಮತ್ತು ಮಿಡಿತದಿಂದ ಕೂಡಿದ ಕರೆ ನೀಡುವ ಪ್ರೇಯಸಿಯ ಸೌಂದರ್ಯವನ್ನು ನೋಡುವ ಬಗೆ ಬೇರೆ. ಆದರೆ ಈ ಎರಡೂ ಭಾವಗಳು ನಮ್ಮಲ್ಲಿ ಬರುವುದರಿಂದ ಸೌಂದರ್ಯವನ್ನು ನೋಡುವ ಎರಡೂ ಬಗೆ ಭಿನ್ನ ಭಿನ್ನವಾಗಿದ್ದು ಇವೆರಡೂ ನಮಗೆ ಸಮನಾಗಿ ಆನಂದವೀಯುತ್ತಾ ಇರುವಾಗ ನಮ್ಮ ಧ್ಯೇಯ ಯಾವುದಾಗಿರಬೇಕು ಎನ್ನುವ ಪ್ರಶ್ನೆ ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.