Kagga Logo

Complete happiness

889

893

889

ಭ್ರಾಂತಿಯೋ ಸಂಪೂರ್ಣ ಸುಖದಾಶೆ ಬಾಹ್ಯದಲಿ ।
ಸಾಂತ ಲೋಕದ ಸೌಖ್ಯ, ಖಂಡಖಂಡವದು ॥
ಸ್ವಾಂತಕೃಷಿಯಿಂ ಬ್ರಹ್ಮವೀಕ್ಷೆ ಲಭಿಸಿರ್ದೊಡೇ- ।
ಕಾಂತ ಪೂರ್ಣಾನಂದ - ಮಂಕುತಿಮ್ಮ ॥ ೮೮೯ ॥

ಬಾಹ್ಯ ಬದುಕಿನಲ್ಲಿ ನಮಗೆ ಸಂಪೂರ್ಣ ಅಥವಾ ಪರಿಪೂರ್ಣ ಸುಖ ಸಿಗುತ್ತದೆ ಎನ್ನುವುದು ‘ಭ್ರಮೆ’. ಏಕೆಂದರೆ ಬಾಹ್ಯ ಸುಖಗಳೆಲ್ಲಾ ತುಂಡು ತುಂಡಾದದ್ದು. ಸ್ವಂತ ಪ್ರಯತ್ನದಿಂದ ಪರಬ್ರಹ್ಮವಸ್ತುವನ್ನು ನೋಡಲಾದರೆ ಅದು ನಮಗೆ ಸಿಗುವ ಪೂರ್ಣಾನಂದ, ಎಂದು ಸಂಪೂರ್ಣ ಆನಂದದ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

890

ನಶ್ವರಾಕೃತಿ ನಾಮಮಯ ವಿಶ್ವಾರ್ಧಿಯಿದು ।
ಶಾಶ್ವತಬ್ರಹ್ಮದುಚ್ಛ್ವಾಸ ಘನ ಬಿಂದು ॥
ಪ್ರಶ್ವಸಿತದಲೆಗಳನೆ ಪಿಡಿದು ಗುರಿಯರಿತೀಜೆ ।
ವಿಶ್ವಮೂಲಾಪ್ತಿಯಲ - ಮಂಕುತಿಮ್ಮ ॥ ೮೯೦ ॥

ಒಂದು ಶಾಶ್ವತ ಘನಬಿಂದುವಾದ ಆ ಪರಮಾತ್ಮನ ಉಸಿರಾಟದ ಉಚ್ವಾಸ, ನಿಶ್ವಾಸಗಳಂತಿರುವ ಮತ್ತು ಕಾಲಗತಿಯಲ್ಲಿ ಹೇಳ ಹೆಸರಿಲ್ಲದಂತೆಯೇ ಕಳೆದುಹೋಗುವ, ನಮ್ಮ ರೂಪ ಮತ್ತು ನಾಮಗಳಿಂದಲೇ ತುಂಬಿರುವುದು ಈ ಜಗತ್ತೆಂಬ ಕಡಲು. ಸಮುದ್ರದ ಉಸಿರಾಟದ ಉಚ್ವಾಸ ನಿಶ್ವಾಸದಂತಿರುವ, ಅದರ ಅಲೆಗಳನ್ನು ಹಿಡಿದು, ಎಂದರೆ ಗಮನಿಸಿದರೆ, ಅದರ ಮೂಲವಾದ ಕಡಲು ದೊರೆಯುವಂತೆ, ಈ ವಿಶ್ವದಲ್ಲಿರುವ, ನಮ್ಮ ರೂಪ ಮತ್ತು ನಾಮಗಳ ಮೂಲಕವೇ ವಿಶ್ವದ ಮೂಲವಾದ ಆ ಪರಮಾತ್ಮನನ್ನು ಅರಿತು, ಪಡೆಯಬಹುದು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

891

ನಿನ್ನ ಕಹಿಸಿಹಿಯೆಲ್ಲ ಕಡಲೊಳುಪ್ಪಾಗುವುದು ।
ನಿನ್ನೆಲ್ಲ ಗುಣಗಳುಂ ಬ್ರಹ್ಮದೊಳಗಂತು ॥
ಪುಣ್ಯವೋ, ಪಾಪವೋ, ಅಹಿತವೋ, ಹಿತವೊ ಅದು ।
ಚೆನ್ನಹುದು ಬೊಮ್ಮನಲಿ - ಮಂಕುತಿಮ್ಮ ॥ ೮೯೧ ॥

ನದಿಯ ಸಿಹಿ ನೀರು ಹರಿದು ಕಡಲ ಸೇರಿದಾಗ ಉಪ್ಪಾಗುತ್ತದೆ. ಹಾಗೆಯೇ, ಬದುಕಿನಲ್ಲಿ ನೀನುಂಡ ಕಹಿ-ಸಿಹಿಗಳೆಲ್ಲವೂ ಪರಬ್ರಹ್ಮನಲ್ಲಿ ಲೀನವಾಗುತ್ತವೆ. ನೀನು ಮಾಡಿರುವ, ಪುಣ್ಯವೋ,ಪಾಪವೋ,ಅಹಿತವೋ, ಹಿತವೊ ಅದು ಅವನಲ್ಲಿ ಸೇರಿದಮೇಲೆ, ಅದ್ಯಾವುದೂ ಇಲ್ಲದೆ ಪರಬ್ರಹ್ಮನಲ್ಲಿ ಚೆನ್ನಾಗಿ ಸೇರಿಹೋಗುತ್ತದೆ, ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

892

ಹೊರಗೆ, ವಿಶ್ವದಿನಾಚೆ, ದೂರದಲಿ, ನೀಲದಲಿ ।
ಒಳಗೆ, ಹೃತ್ಕೂಪದಾಳದಲಿ, ಮಸಕಿನಲಿ ॥
ನೆಲೆಗಳಿಂತೆರಡು ಮೂಲ ರಹಸ್ಯಕವುಗಳುಲಿ ।
ಕಲೆತಂದು ನೀಂ ಜ್ಞಾನಿ - ಮಂಕುತಿಮ್ಮ ॥ ೮೯೨ ॥

ಹೊರಗೆ, ಎಂದರೆ ಈ ಜಗತ್ತಿನ ಪರಿಧಿಯಿಂದ ಆಚೆ, ದೂರದಲಿ, ಗಗನದಲ್ಲಿರುವ ರಹಸ್ಯಶಕ್ತಿ ಮತ್ತು ಒಳಗೆ, ಎಂದರೆ ಹೃದಯಾಂತರಾಳದಲಿ, ಮಸುಕುಮಸುಕಾಗಿರುವ ನಮ್ಮ ಆತ್ಮ ಶಕ್ತಿ ಎರಡೂ ಕಲೆತು ಒಂದಾದಾಗ ನಮಗೆ ಜ್ಞಾನವುಂಟಾಗುತ್ತದೆ, ಮತ್ತು ನಾವು ಜ್ಞಾನಿಗಳಾಗುತ್ತೇವೆ ಎಂದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

893

ಸ್ವಪ್ನಲೋಕವ ಜಾಗೃತಂ ಸುಳ್ಳೆನುವನಲ್ತೆ? ।
ಸುಪ್ತಂಗೆ ಜಾಗೃತನ ಲೋಕಮುಂ ಸುಳ್ಳೇ ॥
ಸ್ವಪ್ನ ಜಾಗ್ರತ್ಸುಪ್ತಿಗಳ ಹಿಂದೆ ನಿರ್ಲಿಪ್ತ- ।
ಗುಪ್ತಾತ್ಮನಿಹುದು ದಿಟ - ಮಂಕುತಿಮ್ಮ ॥ ೮೯೩ ॥

ಸ್ವಪ್ನ ಲೋಕವನ್ನು ಜಾಗೃತನು ಸುಳ್ಳು ಎನ್ನುವಂತೆ, ಮಲಗಿ ನಿದ್ರಿಸುವವನಿಗೆ ಜಾಗೃತನ ಲೋಕವೂ ಸುಳ್ಳೆನಿಸುತ್ತದೆ. ಈ ಜಾಗೃತ, ಸ್ವಪ್ನ ಮತ್ತು ಸುಪ್ತ, ಅವಸ್ಥೆಗಳಿಗೆ ಅತೀತವಾದ ಮತ್ತು ಈ ಅವಸ್ಥೆಗಳ ಪ್ರಭಾವಕ್ಕೊಳಗಾಗದ,ಎಂದರೆ ನಿರ್ಲಿಪ್ತ ಸ್ಥಿತಿಯಲ್ಲಿ, ಗೂಢವಾಗಿ ‘ಆತ್ಮ’ವಿರುವುದು ದಿಟ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.