A≈õvattha
884
—
888
884
ವಸ್ತು ವಿಜ್ಞಾನದಿಂ ಜೀವನಸಮೃದ್ಧಿ ಮಿಗೆ ।
ವಿಸ್ತರಿಸೆ ವಿಶ್ವೈಕ್ಯಭಾವ ಜನಮನದೊಳ್ ॥
ದೃಷ್ಟಲೋಕದ ಬೆಡಗದೃಷ್ಟವನು ಮರಸದಿರೆ ।
ಸ್ವಸ್ತಿ ಲೋಕಕ್ಕೆಲ್ಲ - ಮಂಕುತಿಮ್ಮ ॥ ೮೮೪ ॥
ಜಗತ್ತಿನಲ್ಲಿರುವ ವಸ್ತುಗಳ ಕುರಿತಾದಂತಹ ವಿಜ್ಞಾನದ ವಿಷಯದಲ್ಲಿ ಹೆಚ್ಚು ಸಂಶೋಧನೆಯಿಂದ ಜನಜೀವನ ಸುಧಾರಿಸುತ್ತದೆ ಮತ್ತು ಜಗತ್ತಿನ ಜನರು ಪರಸ್ಪರ ಹತ್ತಿರವಾಗಿ ಒಂದು ವಿಶ್ವೈಕ್ಯಭಾವ ಉಂಟಾಗುತ್ತದೆ. ಆದರೆ ಕಣ್ಣಿಗೆ ಕಾಣುವ ಈ ಜಗತ್ತಿನ ಬೆಡಗು,ಎಂದರೆ ಮಾಯೆ, ಈ ಜಗತ್ತನ್ನು ಮತ್ತು ಈ ಜಗತ್ತಿನ ಮಾಯೆಯನ್ನು ಸೃಷ್ಟಿಸಿದ, ಆದರೂ ಕಣ್ಣಿಗೆ ಕಾಣದ, ಆ ಪರಮ ಶಕ್ತಿಯ ವಿಸ್ಮರಣೆಯನ್ನುಂಟಾಗದಿದ್ದರೆ ಲೋಕದಲ್ಲಿ ಸ್ವಸ್ತಿ, ಎಂದರೆ ಜನಜೀವನದಲ್ಲಿ ಸ್ವಾಸ್ಥ್ಯ(ಆರೋಗ್ಯ) ಉಂಟಾಗುತ್ತದೆ ಎಂದು, ಜಗತ್ತು ಮತ್ತು ಜಗನ್ನಿಯಾಮಕನ ನಡುವೆ ಸಮನ್ವಯವನ್ನು ಕಂಡುಕೊಳ್ಳಬೇಕಾದ ಅವಶ್ಯಕತೆಯನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
885
ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ ।
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ॥
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ ।
ಆನಂದ ಧರೆಗಂದು - ಮಂಕುತಿಮ್ಮ ॥ ೮೮೫ ॥
ಜನಪದದಲ್ಲಿ ಶಿಸ್ತನ್ನು ಪಾಲಿಸುವುದರಲ್ಲಿ, ಸಮುಷ್ಟಿಯ ಸಂಪತ್ತನ್ನು ಅನುಭವಿಸುವುದರಲ್ಲಿ, ಜ್ಞಾನದ ಅನುಸಂಧಾನದಲಿ, ಮೌಲಗಳ ಲೆಕ್ಕಾಚಾರದಲ್ಲಿ, ಮಾನವತೆಯೇ ಧರ್ಮವಾಗಿ, ಈ ಭುವಿಯಲ್ಲಿ ಸ್ಥಿರವಾಗಿ ಬೇರೂರಿದಾಗ, ಈ ಭುವಿಗೆ ಅಂದೇ ಆನಂದದ ದಿನ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು,ಈ ಮುಕ್ತಕದಲ್ಲಿ.
886
ಅಶ್ವತ್ಥವಿಲ್ಲಿ ಬಾಡಿದೊಡೇನು? ಚಿಗುರಲ್ಲಿ; ।
ನಶ್ವರತೆ ವಿಟಪ ಪರ್ಣಂಗಳಲಿ ಮಾತ್ರ; ॥
ಶಾಶ್ವತತೆ ರುಂಡಮೂಲದಲಿ; ಪರಿಚರಿಸದನು ।
ವಿಶ್ವಪ್ರಗತಿಯಂತು - ಮಂಕುತಿಮ್ಮ ॥ ೮೮೬ ॥
ಅಶ್ವತ್ಥ ವೃಕ್ಷವು, ಒಂದುಕಡೆ ಬಾಡಿದರೆ ಮತ್ತೊಂದು ಕಡೆ ಚಿಗುರುವುದು. ಹಾಗೆ ಬಾಡುವುದು, ಕೇವಲ ಕೊಂಬೆಗಳು ಮತ್ತು ಅದರ ಎಲೆಗಳು ಮಾತ್ರ. ಆದರೆ, ಅದರ ಕಾಂಡ ಮತ್ತು ಬೇರುಗಳು ಶಾಶ್ವತವಾಗಿರುತ್ತವೆ. ಹಾಗಾಗಿ ಅದನ್ನು ಉಪಚರಿಸಿದರೆ, ಆ ಮರವು ಹೇಗೆ ಶಾಶ್ವತವಾಗಿರುವುದೋ, ಹಾಗೆಯೇ ಒಂದು ಕಡೆ ಹಳತಾಗಿ ನಾಶವಾಗುತ್ತಿದ್ದರೆ, ಮತ್ತೊಂದು ಕಡೆ ಬೆಳೆಯುತ್ತಿರುವ ಈ ಜಗದ್ವೃಕ್ಷವನ್ನೂ, ಉಪಚರಿಸಿದರೆ, ಈ ವಿಶ್ವದ ಪ್ರಗತಿಯೂ ಸಹ ಇರುತ್ತದೆ ಎಂದು, ಜಗತ್ತಿನ ಜೀವನದ ಮತ್ತು ಅದರ ಪ್ರಗತಿಯ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು.
887
ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ ।
ತಿರುಗಿಸಲಿ ತನ್ನ ದೃಷ್ಟಿಯನು ನಿರ್ಮಲದಿಂ ॥
ನಿರತಿಶಯ ಸುಖವಲ್ಲಿ, ವಿಶ್ವಾತ್ಮ ವೀಕ್ಷೆಯಲಿ ।
ಪರಸತ್ತ್ವ ಶಾಂತಿಯಲಿ - ಮಂಕುತಿಮ್ಮ ॥ ೮೮೭ ॥
ಪರಿಪೂರ್ಣ ಸುಖವನ್ನು ಅರಸುವವನು ಮನಸ್ಸಿನಲ್ಲಿ ಕಶ್ಮಲರಹಿತನಾಗಿ, ಅಂತರ್ಮುಖಿಯಾದಾಗ ಅವನಿಗೆ ಅಲ್ಲಿ, ವಿಶ್ವಾತ್ಮಭಾವದಿಂದ, ಬೇಧಗಳು ನಶಿಸಿ, ಪರತತ್ವದ ಶಾಂತಿಯಲ್ಲಿ, ಅಲೌಕಿಕ ಆನಂದದ ಅನುಭವವಾಗುತ್ತದೆ, ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
888
ವ್ಯಕ್ತಿಮಾತ್ರದ ವಿಭವ ವಿಶ್ವಾತ್ಮತಾನುಭವ ।
ಮುಕ್ತಿ ಸುಖವಾಂತರಿಕವದು ನಿರವಧಿಸುಖ ॥
ಭಾಕ್ತ ಪ್ರಪಂಚಸುಖವೆಂತಪರಿಮಿತವಹುದು? ।
ರಿಕ್ತ ಸುಖ ಭಾಹ್ಯ ಸುಖ - ಮಂಕುತಿಮ್ಮ ॥ ೮೮೮ ॥
ವಿಶ್ವಾತ್ಮಾನುಭವ ಎನ್ನುವುದು ವ್ಯಕ್ತಿಗತವಾದ ಅನುಭವ. ನಿರಂತರವಾದ ಆ ಆನಂದದ ಸ್ಥಿತಿ, ಕೇವಲ ಆಂತರಿಕ ಭಾವ. ಈ ಸ್ಥಿತಿ ಮುಕ್ತ ಸ್ಥಿತಿ. ಆದರೆ ಬಾಹ್ಯ ಪ್ರಪಂಚದ ವಿಷಯಗಳ ಮೇಲೆ ಅಧಾರಪಟ್ಟಿರುವ ಸುಖ, ಅಪರಿಮಿತ ಸುಖವಾಗಲು ಹೇಗೆ ಸಾಧ್ಯ? ಹಾಗೆ ಬಾಹ್ಯ ವಸ್ತು, ವಿಷಯ ಮತ್ತು ವ್ಯಕ್ತಿಗಳ ಮೇಲೆ ಆಧಾರಪಟ್ಟಿರುವ ಸುಖ ಕೇವಲ ತಾತ್ಕಾಲಿಕ ಮತ್ತು ಕೀಳುಮಟ್ಟದ ಸುಖ, ಎಂದು ಅಂತರಂಗದ ಅನುಭವದ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.