Worldly and other-worldly
259
—
263
259
ಕಡಲ ಕಡೆದರು ಸುರಾಸುರರು ನಿಜಬಲದಿಂದ ।
ಕುಡಿದನದನು ತಪಸ್ಸಿನಿಂದ ಕುಂಭಜನು ॥
ಕಡಮೆಜನ ಪಾರಗಾಂಬರೆ ಗಾಸಿಯನು ಪಡದೆ? ।
ಪೊಡವಿ ಬಾಳ್ವೆಯುಮಂತು - ಮಂಕುತಿಮ್ಮ ॥ ೨೫೯ ॥
ಅಮೃತವನ್ನು ಪಡೆಯಲು ಸುರರು ಮತ್ತು ಅಸುರರು ಸಮುದ್ರಮಂಥನವನ್ನು ಮಾಡಿದರು. ಅದು ದೈವೀ ಶಕ್ತಿ. ಆದರೆ ತನ್ನ ತಪಸ್ಸಿನ ಶಕ್ತಿಯಿಂದ ಅಗಸ್ತ್ಯನು ಆ ಸಮುದ್ರವನ್ನು ಒಂದೇ ಗುಟುಕಿಗೆ ಕುಡಿದುಬಿಟ್ಟನು. ಆದರೆ ಮಾನವ ಶಕ್ತಿಯನ್ನು ಹೊಂದಿದ ಹುಲುಮಾನವರಾದ ನಾವು ಕಷ್ಟ ಪಡದೆ ಈ ಭವಸಾಗರವನ್ನು ದಾಟಿ ಆ ದಡವನ್ನು ಸೇರಲಾಗುವುದೇ? ಹೇಗೆ ಕಷ್ಟಪಟ್ಟು ಜೀವಿಸುವುದೇ ಈ ಬಾಳಿನ ಸ್ವಭಾವ. ಎಂದು ಒಂದು ವಾಸ್ತವವನ್ನು ನಮ್ಮೆದುರಿಗೆ ಇಡುತ್ತಾರೆ ಮಾನ್ಯ ಗುಂಡಪ್ಪನವರು.
260
ದ್ರಾಕ್ಷಿರಸವೇನಲ್ಲ ಜೀವನದ ತಿರುಳಾರ್ಗಮ್ ।
ಇಕ್ಷುದಂಡದವೊಲದು ಕಷ್ಟಭೋಜನವೆ ॥
ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ ।
ಮಾಕ್ಷಿಕರು ಮಿಕ್ಕೆಲ್ಲ - ಮಂಕುತಿಮ್ಮ ॥ ೨೬೦ ॥
ಬಾಯಿಗಿಟ್ಟ ತಕ್ಷಣ ಸಿಗುವ ದ್ರಾಕ್ಷಿಹಣ್ಣಿನ ರಸದ ರುಚಿಯಂತೆ ಅಲ್ಲ, ಅದು ಕಬ್ಬಿನ ಜಲ್ಲೆಯನ್ನು, ಬಾಯಲ್ಲೇ ಸಿಪ್ಪೆ ತೆಗೆದು ಅಗಿದಾಗ ಮಾತ್ರ ಸಿಗುವ ಸಿಹಿರಸದ ಎರಡು ಹನಿಯಂತೆ ಈ ಜೀವನದ ಸ್ವಾರಸ್ಯವೂ ಯಾರಿಗೂ ಸುಲಭವಾಗಿ ಲಭ್ಯವಾಗುವುದಿಲ್ಲ. ಕಷ್ಟಪಡಬೇಕು. ಹಾಗೆ ಪಡದಿದ್ದ ಪಕ್ಷದಲ್ಲಿ, ಕಬ್ಬಿನ ಜಲ್ಲೆಯಮೇಲೆ ಕುಳಿತ ನೊಣಗಳಿಗೆ ಹೇಗೆ ರಸ ಸಿಗುವುದಿಲ್ಲವೋ ಹಾಗೆ, ಬದುಕಿನ ಅನುಭವ, ಸ್ವಾರಸ್ಯ ಯಾವುದೂ ಸಿಗುವುದಿಲ್ಲ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
261
ಆಟವೋ ಮಾಟವೋ ಕಾಟವೋ ಲೋಕವಿದು! ।
ಊಟ ಉಪಚಾರಗಳ ಬೇಡವೆನ್ನದಿರು ॥
ಪಾಟವವು ಮೈಗಿರಲಿ, ನೋಟ ತತ್ತ್ವದೊಳಿರಲಿ ।
ಪಾಠಿಸು ಸಮನ್ವಯವ - ಮಂಕುತಿಮ್ಮ ॥ ೨೬೧ ॥
ಈ ಜಗತ್ತಿನಲ್ಲಿ ನೀನು ಬಂದಮೇಲೆ ಜೀವನವನ್ನು ಒಂದು ಆಟವಾಗಿಯೋ, ಶ್ರಮವಾಗಿಯೋ, ಹಿಂಸೆಯಾಗಿಯೋ ಅನುಭವಿಸಲೇ ಬೇಕು. ಬೇರೆ ದಾರಿಯಿಲ್ಲ, ಇದೇ ಪ್ರಪಂಚ. ಇದು ನನಗೆ ಇಷ್ಟವಿಲ್ಲ ಎಂದು ನೀನು ನಿರಾಹಾರನಾಗಿ ದೇಹವನ್ನು ದಂಡಿಸಬೇಡ. ದೇಹ ದೃಢವಾಗಿರಲಿ. ಮನಸ್ಸು ಬುದ್ಧಿಗಳು ಪರಮಾತ್ಮನನ್ನು ಚಿಂತಿಸುತ್ತ ಇಹ ಮತ್ತ ಪರಗಳೆರಡರ ನಡುವೆ ಒಂದು ಸಮನ್ವಯವನ್ನು ಸಾಧಿಸು ಎಂದು ಒಂದು ಆದೇಶ ನೀಡುತ್ತಾರೆ ಮಾನ್ಯ ಗುಂಡಪ್ಪನವರು.
262
ಒಂದು ಕಣ್ಣಳುವಂದು ಮತ್ತೊಂದ ತಳ್ಕೈಸಿ ।
ಅಂದ ಚೆಂದಗಳ ಜನವರಸುವುದು ಬಾಳೊಳ್ ॥
ಬಂಧುಮೋಹವೊ ಯಶವೊ ವೈರವೋ ವೈಭವವೊ ।
ಬಂಧಿಪುದು ಜಗಕವರ - ಮಂಕುತಿಮ್ಮ ॥ ೨೬೨ ॥
ಒಬ್ಬರು ಅಳುತ್ತಿದ್ದರೆ ಮತ್ತೊಬ್ಬರು ಅವರನ್ನು ತಬ್ಬಿಕೊಂಡು ಸಂತೈಸಿ ಸಾಂತ್ವನಗೊಳಿಸುತ್ತಾರೆ. ಇದು ಒಂದು ರೀತಿಯ ಬಂಧ. ಹೀಗೆಯೇ ಜನರು ಬಾಳಿನಲ್ಲಿ ಅಂದ ಚೆಂದಗಳ ಅರಸುತ್ತಾರೆ. ಮೋಹ, ಯಶಸ್ಸು, ಪರಾಭವ, ದ್ವೇಷ ಮುಂತಾದ ಭಾವನೆಗಳಿಂದ ಒಬ್ಬರಿಗೊಬ್ಬರು ಬಂಧಿತರಾಗಿ ತನ್ಮೂಲಕ ಈ ಜಗತ್ತಿಗೆ ಅಂಟಿಕೊಂಡಿರುತ್ತಾರೆ, ಈ ಜಗದ ಮನುಜರು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
263
ಬಾಳು ಪಾಳೆನ್ನುವರ ಬಿಟ್ಟಿಹುದೆ ಬೆದಕಾಟ? ।
ತಾಳಿದರೆ ಬಾಳನಂತಹರುಮ್ ಆಶೆಯಲಿ? ॥
ಕಾಲವಿನ್ನಿರದಿಂತು ನಾಳೆ ನೋಡುವಮೆನುತ ।
ಮೇಲನೆ ನಿರೀಕ್ಷಿಪರು - ಮಂಕುತಿಮ್ಮ ॥ ೨೬೩ ॥
ಈ ಜೀವನ ಜಂಜಾಟಗಳ ಆಗರ, ಇದು ಹಾಳು ಎಂದು ಹೇಳುವವರನ್ನೂ ಈ ಬಾಳಿನ ಬೆದಕಾಟ ಬಿಟ್ಟಿಲ್ಲ ಅಲ್ಲವೇ? ತಾಳಿದರೆ ಬಾಳುವೆನು ಎನ್ನುವಾಶೆಯಲಿ ಬಾಳಿದರೆ, ಒಳ್ಳೆಯದು. ಏಕೆಂದರೆ ಕಾಲವು ಎಂದಿಗೂ ಹೀಗೇ ಇರುವುದಿಲ್ಲ. ಇಂದು ಇರುವುದಕ್ಕಿಂತ ಉತ್ತಮ ಕಾಲವನ್ನು ನಿರೀಕ್ಷಿಸುತ್ತಾ ಎಲ್ಲರೂ ಬದುಕುತ್ತಾರೆ, ಎಂದು ಜೀವನದ ಒಂದು ಸತ್ಯವನ್ನು ಅರುಹುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.