Śāstras keep growing
524
—
528
524
ಪಿರಿದೆಲ್ಲ ಮತನೀತಿಗಳಿಗಿಂತ ಜೀವಿತವು ।
ನೆರೆಬಂದ ನದಿ ದಡಕೆ ಬಾಗಿ ಪರಿಯುವುದೇಂ? ॥
ಧರುಮಸೂಕ್ಷ್ಮದ ತಿಳಿವೆ ಲೋಕಸೂತ್ರದ ಸುಳಿವು ।
ಅರಸು ಜೀವಿತ ಹಿತವ - ಮಂಕುತಿಮ್ಮ ॥ ೫೨೪ ॥
ಬದುಕು ಬದುಕಿನ ಎಲ್ಲ ಸೂತ್ರಗಳಿಗಿಂತ ಹಿರಿಯದು. ಉಕ್ಕಿ ಪ್ರವಾಹವಾಗಿ ಹರಿಯುವ ನದಿ, ದಡಕ್ಕೆ ನಮಸ್ಕರಿಸುತ್ತದೇನು? ಧರ್ಮ ಸೂಕ್ಷ್ಮಗಳೆಲ್ಲ ಬದುಕಿನ ಸೂತ್ರಗಳನ್ನು ನಮಗೆ ಅರಿವಾಗಿಸಬೇಕು ಹಾಗಾಗಿ ನೀನು ಅವುಗಳನ್ನೆಲ್ಲ ಮೀರಿ ಬದುಕಿನ ಹಿತವನ್ನು ಹುಡುಕು ಎಂದು ಒಂದು ಜ್ಞಾನದ ಸುಳಿವು ಮತ್ತು ಒಂದು ಆದೇಶ ಎರಡನ್ನೂ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
525
ಜಗ ಬೆಲೆದು ಚಿಗುರುತಿರೆ ಶಾಸ್ತ್ರ ಕರಟರಲಹುದೆ? ।
ನಿಗಮಸಂತತಿಗೆ ಸಂತತಿಯಾಗದಿಹುದೆ? ॥
ಬಗೆಬಗೆಯ ಜೀವಸತ್ತ್ವವಿಕಾಸವಾಗುತಿರ- ।
ಲೊಗೆವುದೈ ವಿಜ್ಞಾನ - ಮಂಕುತಿಮ್ಮ ॥ ೫೨೫ ॥
ಜಗತ್ತೆಲ್ಲ ಬೆಳೆದು ಹೊಸ ವಿಚಾರಗಳು ಚಿಗುರುತ್ತಿರುವಾಗ ಅದಕ್ಕೆ ಪೂರಕವಾದ ಶಾಸ್ತ್ರವು ಸುರುಟಿಕೊಂಡಿರಲು ಸಾಧ್ಯವೇ? ಜ್ಞಾನದ ಆಯಾಮಗಳೂ ಸಹ ಹೊಸ ಹೊಸ ವಿಚಾಗಳ ನೆಲೆಯಾಗಬೇಕು. ಎಲ್ಲೆಡೆಯಲ್ಲಿಯೂ ಹೊಸತಿನ ವಿಕಾಸವಾಗುತ್ತಿರಬೇಕಾದರೆ ಜ್ಞಾನವೂ ವಿಕಾಸಗೊಳ್ಳಬೇಕು ಮತ್ತು ಹಾಗೆ ವಿಕಾಸಗೊಂಡದ್ದರಿಂದ ವಿಜ್ಞಾನದ ಹೊಸ ಹೊಸ ವಿಚಾರಗಳು ಬೆಳಕಿಗೆ ಬರಬೇಕು ಎಂದು ಜಗತ್ತಿನ ನಿರಂತರ ನವೀನತೆಯ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
526
ಸೆರೆಬಿದ್ದು ಧರ್ಮಪಾದಪ ನಿಲದು ಮತಗಳಲಿ ।
ಜರೆಯಿಂದ ಬರಡಹುದು ಮಠದ ನೆರಳಿನಲಿ ॥
ಪರಸತ್ತ್ವರಸ ವಿಶ್ವಜೀವನದ ಬೇರ್ಗಳಿಂ ।
ನೆರೆಯಲಾ ತರು ಸೊಂಪು - ಮಂಕುತಿಮ್ಮ ॥ ೫೨೬ ॥
ಧರ್ಮವೆಂಬ ಮರ ಭಿನ್ನ ಭಿನ್ನ ಮತಗಳ ಆಧಾರದಮೇಲೆ ನಿಲ್ಲುವುದಿಲ್ಲ. ಮಠಗಳ ಮತ್ತು ಅವುಗಳು ಪ್ರತಿಪಾದಿಸುವ ಮತಗಳ ನೆರಳಿನಲ್ಲಿದ್ದರೆ, ಧರ್ಮ ಸೊರಗುತ್ತದೆ. ಜನ ಜೀವನದ ಬದುಕಿನಲಿ ಸಂಸ್ಕೃತಿ ಮತ್ತು ಸಂಸ್ಕಾರಗಳ ಬೇರುಗಳಲ್ಲಿ ಪರತತ್ವದ, ಪರಮಾತ್ಮನ, ತತ್ವ ಮತ್ತು ಸತ್ವಗಳು ಆಳವಾಗಿ ಇಳಿದಲ್ಲಿ ಈ ಧರ್ಮವೆಂಬ ವೃಕ್ಷ ಮತ್ತೆ ಸಮೃದ್ಧಿಯಾಗಿ ಬೆಳೆದು ಸೊಂಪಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
527
ಜೀವಕಾರಣಮೂಲ ಗೂಢವಾಗಿರ್ದೊಡಂ ।
ಧೀವಿಕಾಸದ ಬೆಳಕನಾದನಿತು ಗಳಿಸಿ ॥
ಕೈವಲ್ಯಪಥವನರಸುತ ಯಾತ್ರಿಸಲೆಬೇಕು ।
ದೀವಿಗೆಯು ಮತಿಯೊಂದೆ - ಮಂಕುತಿಮ್ಮ ॥ ೫೨೭ ॥
ಈ ಜಗತ್ತಿನ ಮೂಲ ಕಾರಣವು ಗೂಢವಾಗಿರುವಾಗ, ಬುದ್ಧಿಯು ವೃದ್ಧಿಯಾಗುವಂತಹ ಜ್ಞಾನದ ಬೆಳಕನ್ನು ಪಡೆದು ಪಾರಮಾರ್ಥದ ತತ್ವವನ್ನು ಅರಸುವ ದಾರಿಯಲ್ಲಿ ಪ್ರಯಾಣಮಾಡಲೇಬೇಕು. ಕತ್ತಲಲ್ಲಿ ಬೆಳಕ ನೀಡುವ ದೀವಿಗೆ ಮತ್ತು ಜ್ಞಾನವನ್ನು ಅರಸುವ ಬುದ್ಧಿ ಎರಡೂ ಒಂದೇ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
528
ಭಕ್ತಿ ನಂಬುಗೆ ಸುಲಭ, ಭಜನೆ ವಂದನೆ ಸುಲಭ ।
ತತ್ತ್ವ ಶೋಧನೆ ಕಷ್ಟ; ಮತಿಕಾರ್ಯ ಕಷ್ಟ ॥
ಸುತ್ತುವುದು ಗಿರಿಸುತ್ತ ಸುಳುವೆಂದು ಲೋಕಜನ ।
ಹತ್ತುವನು ತಾಪಸಿಯೊ - ಮಂಕುತಿಮ್ಮ ॥ ೫೨೮ ॥
ಭಕ್ತಿ, ಭಜನೆ, ಧ್ಯಾನಗಳನ್ನು ಮಾಡುವುದು ಸುಲಭದ ಕೆಲಸ. ಆದರೆ ಪರತತ್ವವನ್ನು ಹುಡುಕುವುದು ಮತ್ತು ಆ ಹುಡುಕುವುದಕ್ಕಾಗಿ ನಡೆಸುವ ಬುದ್ಧಿಯ ಕಾರ್ಯ ಇನ್ನೂ ಕಷ್ಟತರವಾದದ್ದು. ಸುಲಭವೆಂದು ಬೆಟ್ಟವನ್ನು ಸುತ್ತುತ್ತಾರೆ ಲೋಕದ ಜನ. ಆದರೆ ಹತ್ತಿ ಸಾಧಿಸುವವನೇ ತಾಪಸಿ ಎಂದು ಭಕ್ತಿ ಮಾರ್ಗವನ್ನು ಮತ್ತು ಪರತತ್ವವನ್ನು ಅರಿಯುವ ಮಾರ್ಗವನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.