Life is a great treasure
249
—
253
249
ಹಾಳು ಹಾಳೆಲ್ಲ ಬಾಳೆನ್ನುತಿರ್ದೊಡೆಯುಮದ- ।
ರೂಳಿಗವ ತಪ್ಪಿಸುವ ಜಾಣನೆಲ್ಲಿಹನು? ॥
ಊಳಿಗವೊ ಕಾಳಗವೊ ಕೂಳ್ಕರೆಯೊ ಗೋಳ್ಕರೆಯೊ ।
ಬಾಳು ಬಾಳದೆ ಬಿಡದು - ಮಂಕುತಿಮ್ಮ ॥ ೨೪೯ ॥
ಈ ಜಗತ್ತಿನಲ್ಲಿ ಇರುವ ಮನುಷ್ಯರೆಲ್ಲಾ ಯಾವುದಾದರೂ ಒಂದು ರೀತಿಯ ಸಂಕಷ್ಟಗಳಿಗೆ ಸಿಕ್ಕು " ಅಯ್ಯೋಈ ಬಾಳೆಲ್ಲ ಹಾಳು " ಎಂದು ಈ ಜೀವನವನ್ನು ಹಳಿಯುತ್ತಿದ್ದರೂ, ಈ ಜಂಜಡದ ಬದುಕಿನಲ್ಲಿ ಜೀವಿಸುವುದನ್ನು ತಪ್ಪಿಸಿಕೊಂಡಂಥಾ ಜಾಣನೆಲ್ಲಿಹನು? ಪರಿರಿಗೆ ಊಳಿಗವನ್ನೋ, ಕಾಳಗವನ್ನೋ ಹೊಟ್ಟೆಪಾಡಿಗಾಗಿ ಗೋಳಾಡುತ್ತಲಾದರೂ ಈ ಜಗತ್ತಿನ ಪ್ರತೀ ಜೀವಿಯೂ ಬಾಳಲೇ ಬೇಕು ಎಂದು ಬದುಕಿನಒಂದು ಅನಿವಾರ್ಯತೆಯನ್ನು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು.
250
ಜೀವನವದೊಂದು ಪರಮೈಶ್ವರ್ಯ ಬೊಮ್ಮನದು ।
ಸೇವೆಯದನೂರ್ಜಿತಂಗೊಳಿಸುವೆಲ್ಲೆಸಕ ॥
ಈವರಾರ್ ಕೊಳುವರಾರೆಲ್ಲರೊಂದಾಗಿರಲು? ।
ನೈವೇದ್ಯಭಾಗಿ ನೀಂ - ಮಂಕುತಿಮ್ಮ ॥ ೨೫೦ ॥
ಈ ಜಗತ್ತು ಮತ್ತು ಇಲ್ಲಿ ನಡೆಯುವ ಜೀವಿಗಳ ಜೀವನವು ಆ ಪರಮಾತ್ಮ ತನ್ನ ವಿನೋದಕ್ಕಾಗಿ ಸೃಷ್ಟಿಸಿಕೊಂಡ ಸಂಪತ್ತು. ಇದು ಅವನಿಗೆ ಸೇರಿದ್ದು. ಇಲ್ಲಿರುವ ಎಲ್ಲ ಜೀವಿಗಳೂ ಈ ಜಗತ್ತಿನಲ್ಲಿ ಇದ್ದು ಅನುಭವಿಸಿ, ತಮ್ಮ ಎಲ್ಲ ಕೆಲಸಗಳನ್ನೂ ಅದನ್ನು ಊರ್ಜಿತಗೊಳಿಸುವುದರಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲವೂ ಅವನದೇ ಆಗಿ ಎಲ್ಲವೂ ಅವನೇ ಆಗಿರುವಾಗ ಇಲ್ಲಿ ಕೊಡುವವನೂ ಮತ್ತು ತೆಗೆದುಕೊಳ್ಳುವವನೂ ಬೇರೆ ಬೇರೆ ಅಲ್ಲ.ಈ ಜಗತ್ತಿನ ಸಕಲ ಪ್ರಾಣಿಗಳ ಜೀವನವನ್ನು ಸಮಗ್ರ ಬಾಳಿನ ನೈವೇದ್ಯದಂತೆ ಆ ಪರಮಾತ್ಮನಿಗೆ ನಿವೇದನೆ ಮಾಡುತ್ತಿರುವಾಗ ನಾವೆಲ್ಲಾ ಅದರೊಳಗೆ ಒಂದು ಭಾಗವನ್ನು ಹಂಚಿಕೊಂಡಿದ್ದೇವೆ ಎನ್ನುತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗ್ಗದಲ್ಲಿ
251
ತಲೆಯಮೇಗಡೆ ಬೇರು, ಕೆಳಗೆ ಕೊಂಬೆಲೆ ಚಿಗುರು ।
ಬಿಳಲೂರೆಗಳ ಲೆಕ್ಕಕಿಲ್ಲ ಕೊನೆ ಮೊದಲು ॥
ಬೆಳೆವುದೀ ಪರಿಯರಳಿಮರದಂತೆ ನರಕೋಟಿ ।
ನಲಿವನದರಲಿ ಬೊಮ್ಮ - ಮಂಕುತಿಮ್ಮ ॥ ೨೫೧ ॥
ಒಂದು ಅರಳಿ ಮರದ ಕೊಂಬೆಯಿಂದಬಿಳಲುಗಳು ಹೊರಟು ಭೂಮಿಯನ್ನು ಮುಟ್ಟಿ, ಮತ್ತೆ ಭೂಮಿಯೊಳಕ್ಕೆ ನುಸುಳುತ್ತದೆ. ಇದು ಮೇಲಿನ ಬೇರು ಆ ಬೇರು ಮೇಲಿದ್ದು ಕೊಂಬೆಗಳು, ಎಲೆಗಳು ಮತ್ತು ಚಿಗುರು, ಅರಳೀ ಮರದಲ್ಲಿ ಕೆಳಗಿರುತ್ತದೆ. ಅದೇ ರೀತಿ ಜೀವ ಧರಿಸಿದ ದೇಹ ಹಳತಾಗುತ್ತದೆ, ಮೇಲಿದ್ದರೂ ಮುಂದೆ ವಂಶದಲ್ಲಿನ ಅನ್ಯ ಶಾಖೆಗಳಿಗೆ ಮತ್ತು ಚಿಗುರಂಥ ಮಕ್ಕಳು ಮೊಮ್ಮಕಳಿಗೆ ಬೇರಂತೆ ಆಧಾರವಾಗಿರುತ್ತದೆ. ಇಂತಹ ಕೋಟಿ ಕೋಟಿ ಮರಗಳ ಬೇರುಗಳ ಕೊಂಬೆಗಳ ಮತ್ತು ಚಿಗುರುಗಳ ಪ್ರತಿರೂಪವಾದ ಕೋಟಿ ಕೋಟಿ ನರರಿರುವ ಈ ಜಗತ್ತಿನಲ್ಲಿ ಪರಮಾತ್ಮ ನಲಿವಿನಿಂದ ಆನಂದದಿಂದ ನಲಿಯುತ್ತಾನೆ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು.
252
ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು ।
ಸಂದಿಹುದು ಚಿರನವತೆಯಶ್ವತ್ಥಮರಕೆ ॥
ಎಂದೆಂದುಮಂತಿರುವುದೀ ವಿಶ್ವವೃಕ್ಷವದ ।
ರೊಂದು ರೆಂಬೆಯೊ ನೀನು - ಮಂಕುತಿಮ್ಮ ॥ ೨೫೨ ॥
ಅಶ್ವತ್ಥಮರದ ಒಂದು ಕೊಂಬೆ ಒಣಗಿದರೆ ಮತ್ತೊಂದು ಚಿಗುರುತ್ತದೆ.ಹೇಗೆ ಆ ಮರವು ತನ್ನ ಚಿರನೂತನತೆಯನ್ನು ಕಾಪಾಡಿಕೊಳ್ಳುತ್ತದೋ, ಹಾಗೆಯೇ ಸಕಲ ಜೀವರಾಶಿಗಳಿಂದ ಕೂಡಿದ ಈ ಜಗತ್ತೆಂಬ ವಿಶ್ವ ವೃಕ್ಷವೂ ಎಂದೆಂದೂ ಬಾಡದೆ ಇರುತ್ತದೆ. ಅಂತಹ ವಿಶ್ವವೃಕ್ಷದ,ಒಂದು ರೆಂಬೆ ನೀನೆಂದು ತಿಳಿ, ಎಂದು ಒಂದು ಆದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ
253
ಅಂದಂದಿಗಾದನಿತು ಬುಡ ಕಟ್ಟಿ ಕಳೆ ತೆಗೆದು ।
ಚೆಂದಳಿರು ದಿನದಿನಮುಮೊಗೆಯೆ ನೀರೆರೆದು ॥
ಸಂದ ಬಲದಿಂದ ಜಗದಶ್ವತ್ಥ ಸೇವೆಯಲಿ ।
ನಿಂದಿರುವುದಲೆ ಧರ್ಮ - ಮಂಕುತಿಮ್ಮ ॥ ೨೫೩ ॥
ಇದು ನಮಗೆ ಜೀವಿಸುವ ಬಗೆಯ ತತ್ವವನ್ನು ಬೋಧಿಸುವ ಕಗ್ಗ. ಒಂದು ಸಣ್ಣ ಅರಳೀ ಸಸಿಯನ್ನು ತಂದು, ಭೂಮಿಯಲ್ಲಿ ಗುಣಿ ತೋಡಿ, ಸಸಿ ನೆಟ್ಟು, ಪ್ರತಿನಿತ್ಯ ಬೊಗಸೆ ಬೊಗಸೆಯಲ್ಲಿ ನೀರನ್ನು ಎರೆದು, ಕಳೆ ತೆಗೆದು ಅದನ್ನು ಕಾಪಾಡಿ ಒಂದು ಬೃಹತ್ವೃಕ್ಷವನ್ನಾಗಿಸಿದಂತೆ, ಈ ಜಗದಶ್ವತ್ಥದ ಸೇವೆಯಲಿ ನಿಲ್ಲುವುದೇ ಧರ್ಮವೆನ್ನುತ್ತಾರೆ ಮಾನ್ಯ ಗುಂಡಪ್ಪನವರು.