Kagga Logo

Experience is the proof

514

518

514

ಎನಗೆ ಸುಖವಿಲ್ಲವದರಿಂ ದೇವರಿರನೆನ್ನು-।
ವನುಮತಿಯ ನೀಂ ಗೆಯ್ಯೆ, ಸುಖಿಯದೇನನುವಂ ॥
ತನುಬಾಹ್ಯಕರಣದನುಭವಕಿಂತ ಸೂಕ್ಷ್ಮ ತರ- ।
ದನುಭವವ ನೀನರಸೊ - ಮಂಕುತಿಮ್ಮ ॥ ೫೧೪ ॥

ನಿನಗೆ ಕಷ್ಟ ಬಂದಿದೆ, ಹಾಗಾಗಿ ಆ ದೇವರೇ ಇಲ್ಲ ಎಂದು ನೀನು ಅನುಮಾನ ಪಟ್ಟರೆ, ಸುಖಪಡುತ್ತಿರುವವನು ಏನು ಹೇಳುತ್ತಾನೆ ಎಂದು ನೋಡು. ಈ ಸುಖ ದುಃಖವೆನ್ನುವುದು ಕೇವಲ ಹೊರಗಿನ ಅನುಭವ. ಆದ್ದರಿಂದ ದೇಹ ಮನಸ್ಸು ಬುದ್ಧಿಗಳೆಂಬ ಬಾಹ್ಯ ‘ಕರಣ’ಗಳಿಗೂ ಅತೀತವಾದ ಸೂಕ್ಷತರವಾದ ಆನಂದದ ಅಥವಾ ಸುಖದ ಅನುಭವವನ್ನು ನೀನು ಹುಡುಕು ಎಂದು ಒಂದು ಸೂಚನೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ

515

ಎನ್ನ ಬೇಡಿಕೆ ನಷ್ಟವಹುದೆಂತು ದೇವನಿರೆ? ।
ಅನ್ಯಾಯ ಜಗವೆಲ್ಲ; ದೇವನಿರನೆನುತ ॥
ತನ್ನ ತನ್ನನುಭವವ ನಂಬಲೋರೊರ್ವನುಂ ।
ಭಿನ್ನವಾಗದೆ ಸತ್ಯ? - ಮಂಕುತಿಮ್ಮ ॥ ೫೧೫ ॥

"ಆ ದೇವನಿರುವುದಾದರೆ ನನ್ನ ಬೇಡಿಕೆಗಳು ಈಡೇರದೆ ಇರಲು ಸಾಧ್ಯವೇ?" ಎಂದು ದೇವರನ್ನು ನಂಬುವವನು ಆಶಾಭಾವದಿಂದ ಇರುತ್ತಾನೆ. ಈ ಜಗತ್ತಿನಲ್ಲಿ ಎಷ್ಟೊಂದು ಅನ್ಯಾಯಗಳು ಅಕ್ರಮಗಳು ದುಷ್ಟತನಗಳು ನಡೆಯುತ್ತಿರುವಾಗ " ಛೆ! ಇಷ್ಟೊಂದು ಅನ್ಯಾಯಗಳಿರುವಾಗ ಆ ದೇವರೆಂಬುವನು ಇರಲು ಸಾಧ್ಯವಿಲ್ಲ ಎಂದು ವಾಸ್ತವವಾದಿ ಅಥವಾ ನಾಸ್ತಿಕವಾದಿ ಇರುತ್ತಾನೆ. ಹೀಗೆ, ಇರುವ ಒಂದು ಸತ್ಯಕ್ಕೆ ಅವರವರ ಅನುಭವಕ್ಕೆ ಅನುಸಾರವಾಗಿ ಬೇರೆ ಪರಿಭಾಷೆಯನ್ನು ಕೊಟ್ಟಾಗ ಸತ್ಯವು ಭಿನ್ನವಾಗದೆ? ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

516

ಅನುಭವದ ಪರಿ ನೂರ್ವರಿಗೆ ನೂರು ನೂರು ಪರಿ ।
ದಿನವೊಂದರೊಳೆ ಅದೊಬ್ಬಂಗೆ ನೂರು ಪರಿ ॥
ಎಣಿಪುದಾರನುಭವವನ್, ಆವ ಪ್ರಮಾಣದಲಿ ।
ಮಣಲ ಗೋಪುರವೊ ಅದು - ಮಂಕುತಿಮ್ಮ ॥ ೫೧೬ ॥

ನಮಗೆ ಯಾವುದೇ ವಿಷಯದ ಅನುಭವ ಎಲ್ಲ ಕಾಲಕ್ಕೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಒಂದು ವಿಷಯ ನೂರು ಜನಕ್ಕೆ ನೂರು ರೀತಿಯ ಅನುಭವವನ್ನು ನೀಡಬಹುದು. ಹಾಗೆಯೇ ಒಂದೇ ವಿಷಯವು ಒಂದೇ ದಿನದಲ್ಲಿ ಒಬ್ಬನೇ ವ್ಯಕ್ತಿಗೆ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯ ಅನುಭವವನ್ನು ನೀಡಬಹುದು. ಹಾಗೆಯೇ ಪರಮಾತ್ಮಾನುಭವವೂ ಸಹ ಸದಾಕಾಲ ಒಂದೇ ರೀತಿಯಲ್ಲಿರುವುದಿಲ್ಲ ಮತ್ತು ಅವನನ್ನು ಕುರಿತಾದ ಭಾವನೆಗಳನ್ನುಎಣಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ, ಈ ಅನುಭವವು, ಎದ್ದು, ಬಿದ್ದು ಮತ್ತೆ ಬೇರೆಯೇ ರೂಪ ಪಡೆದು ನಿಲ್ಲುವಂತೆ ಮತ್ತೆ ಬೀಳುವ ಮರಳ ಗೋಪುರವಿದ್ದಂತೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

517

ಮನುಜಸಾಕಲ್ಯದನುಭವಕೆ ಮಿತಿಗೊತ್ತುಂಟೆ? ।
ದಿನದಿನವು ಕಡಲಲೆಗಳಂತೆ ಪರಿವುದದು ॥
ಅನುಮಿತಿಯ ನಿರ್ಧಾರವದರಿಂ ನಿರಾಧಾರ ।
ದನಿ ನೂರು ನರನೆದೆಗೆ - ಮಂಕುತಿಮ್ಮ ॥ ೫೧೭ ॥

ಮನುಷ್ಯನ ಸಕಲ ಅನುಭವಗಳಿಗೆ ಒಂದು ಮಿತಿಯು ಉಂಟೆ? ಸಮುದ್ರದ ಮೇಲೆ ಏಳುವ ಅಲೆಗಳನ್ನು ಎಣಿಸಲಾಗುವುದೇ? ಹಾಗೆಯೇ ಪ್ರತಿನಿತ್ಯ ಮನುಷ್ಯನ ಹೃದಯದಲ್ಲಿ ಏಳುವ ಭಾವನೆಗಳನ್ನು ಎಣಿಸಲೂ ಆಗುವುದಿಲ್ಲ ಮತ್ತು ಅದರ ಉದ್ದ, ಆಳ, ಮತ್ತು ಎತ್ತರಗಳನ್ನು ಅಳೆಯಲೂ ಆಗುವುದಿಲ್ಲ. ಹಾಗೆ ಅಳೆದರೆ ಅದಕ್ಕೆ ಯಾವ ಆಧಾರವೂ ಇರುವುದಿಲ್ಲ ಏಕೆಂದರೆ ನೂರಾರು ಭಾವನೆಯ ದನಿಗಳು ನರನ ಹೃದಯಕ್ಕೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

518

ಅರ್ಥವುಂಟನುಭವಕ್ಕಾದೊಡದು ಮಿತದರ್ಥ ।
ಸ್ವಾರ್ಥ ಮಿತವಾದಂತೆ ವಿಸ್ತರಿಪುದರ್ಥ ॥
ಸಾರ್ಥಕವಪ್ಪುದಾರ್ಷೇಯಾರ್ಥದೊಡವೆರೆಯೆ ।
ಪಾರ್ಥನನುಭವದಂತೆ - ಮಂಕುತಿಮ್ಮ ॥ ೫೧೮ ॥

ನಮ್ಮ ಪ್ರತೀ ಅನುಭವಕ್ಕೂ ಅರ್ಥವಿದೆಯಾದರೂ ಅದು ಕೇವಲ ನಮ್ಮ ಪರಿಮಿತ ಮತಿಯ ಮಿತಿಗೆ ಸೀಮಿತವಾದದ್ದು. ಏಕೆಂದರೆ ಅಲ್ಲಿ ಸ್ವಾರ್ಥದ ಲೇಪವಿರುತ್ತದ್ದೆ. ಸ್ವಾರ್ಥದ ಭಾವ ಕಡಿಮೆಯಾದಲ್ಲಿ ಆ ಭಾವದ ಅರ್ಥ ವಿಸ್ಥಾರವಾಗುತ್ತದೆ. ಅರ್ಜುನನಿಗೆ ಯುದ್ಧರಂಗದಲ್ಲಿ ವೈರಾಗ್ಯ ಬಂದಾಗ ಹೇಗೆ ಅವನಿಗೆ ‘ಭಗವದ್ಗೀತೆ’ ಯ ಭೋಧನೆಯಾಯಿತೋ ಹಾಗೆಯೇ ನಮ್ಮ ಸನಾತನ ಋಷಿಮುನಿಗಳಿಂದ ಹರಿದುಬಂದಿರುವ ಜ್ಞಾನದ ವಾಹಿನಿಯೊಂದಿಗೆ ನಮ್ಮ ಭಾವ ಮಿಳಿತವಾದರೆ ಆಗ ನಾವು ಭಾವ ಸಾರ್ಥಕ್ಯವನ್ನು ಪಡೆಯಬಹುದು ಎಂದು ಭಾವಗಳ ಔನ್ನತ್ಯವನ್ನು ಹೇಗೆ ಪಡೆಯಬಹುದು ಎಂದು ನಮಗೆ ಮಾರ್ಗ ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.